ಸಿಎಂ ಗ್ರಾಮವಾಸ್ತವ್ಯ ಸಂಬಂಧ-ಗ್ರಾಮವಾಸ್ತವ್ಯ ಮಾರ್ಗಸೂಚಿಗಳನ್ನು ಜಿಲ್ಲಾಡಳಿತಕ್ಕೆ ನೀಡಿದ ಸರ್ಕಾರ

ಬೆಂಗಳೂರು,ಜೂ.10- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಲಿರುವ ಗ್ರಾಮವಾಸ್ತವ್ಯಕ್ಕೆ ಸಂಬಂಧಿಸಿದಂತೆ 13 ಅಂಶಗಳ ಗ್ರಾಮವಾಸ್ತವ್ಯ ಮಾರ್ಗಸೂಚಿಗಳನ್ನು ಸರ್ಕಾರ ಜಿಲ್ಲಾಡಳಿತಕ್ಕೆ ನೀಡಿದೆ.

ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯಕ್ಕೆ ಅನುಕೂಲಕರವಾದ ಶಾಲೆ, ಸಾರ್ವಜನಿಕರ ಭೇಟಿ ಮತ್ತು ಸಂವಾದ ನಡೆಸಲು ವಿಸ್ತಾರ ಪ್ರದೇಶವನ್ನು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರ ಅಭಿಪ್ರಾಯ ಪಡೆದು ಗುರುತಿಸಬೇಕು.

ಸಾರ್ವಜನಿಕರಿಂದ ಮುಖ್ಯಮಂತ್ರಿಗಳು ಅಹವಾಲು ಸ್ವೀಕರಿಸಲು, ಸಂವಾದ ನಡೆಸಲು ಅನುಕೂಲವಾಗುವಂತೆ ವೇದಿಕೆ ನಿರ್ವಹಣೆ ಮಾಡಬೇಕು.ಅಲ್ಲದೆ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಲು ಸ್ಥಳೀಯ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ರಚಿಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಅರ್ಜಿಗಳಿಗೆ ಸ್ವೀಕೃತಿಯನ್ನು ಜಿಲ್ಲಾಡಳಿತದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಮುಖ್ಯಮಂತ್ರಿ ಅವರ ಜನತಾದರ್ಶನ ಶಾಖೆಯ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿಕೊಂಡು ಕಾರ್ಯ ನಿರ್ವಹಿಸಬೇಕು.ವಾರ್ತಾ ಇಲಾಖೆ ಸಿದ್ದಪಡಿಸುವ ಸ್ಥಳೀಯ ರೈತರಿಗೆ ಮಾಹಿತಿ ನೀಡುವ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು.

ಸಾರ್ವಜನಿಕರೊಂದಿಗೆ ಮುಖ್ಯಮಂತ್ರಿ ಸಂವಾದ ನಡೆಸಲು ಧ್ವನಿವರ್ಧಕ ಮತ್ತಿತರ ಸಿದ್ದತೆ ಮಾಡಿಕೊಳ್ಳಬೇಕು, ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನ ಮಾಹಿತಿ ನೀಡುವ ನುರಿತ ತಜ್ಞರನ್ನು ಆಹ್ವಾನಿಸಿ ಅವರಿಂದ ಮಾಹಿತಿ ವಿನಿಮಯ ಮಾಡಿಕೊಳ್ಳುವುದು.

ಸಂಜೆ 6 ಗಂಟೆ ನಂತರ ವಾಸ್ತವ್ಯ ಮಾಡುವ ಸ್ಥಳದಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಮತ್ತು ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸುವುದು, ಗ್ರಾಮವಾಸ್ತವ್ಯದ ಶಾಲೆ ಹಾಗೂ ಆ ಗ್ರಾಮದ ಎಲ್ಲ ಶಾಲೆಗಳ ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯವನ್ನು ಶಾಶ್ವತವಾಗಿ ಸುಧಾರಣೆ ಮಾಡುವುದು, ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಮೂಲಭೂತ ಸಮಸ್ಯೆಗಳನ್ನು ಪಟ್ಟಿ ಮಾಡಿ ಆದ್ಯತೆ ಮೇರೆಗೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು.

ಸ್ಥಳೀಯವಾಗಿ ಕಂಡುಬರುವ ಬೇಡಿಕೆಗಳನ್ನು ಆಯಾ ಇಲಾಖೆಗೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವುದು ಸೇರಿದಂತೆ 13 ಅಂಶಗಳ ಮಾರ್ಗಸೂಚಿಗಳನ್ನು ಜಿಲ್ಲಾಡಳಿತಕ್ಕೆ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ