ಬೆಂಗಳೂರು, ಜೂ 10- ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಕೈ ಬಿಡುವಂತೆ ವಿವಿಧ ರೈತ ಸಂಘಟನೆಗಳು ರಾಜ್ಯದ ಪ್ರಮುಖ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದ ಪರಿಣಾಮ ಸಂಚಾರಕ್ಕೆ ಅಡಚಣೆಯಾಯಿತು.
ರಾಜ್ಯ ರೈತ ಸಂಘ, ಹಸಿರು ಸೇನೆ ಸೇರಿದಂತೆ ವಿವಿಧ ರೈತ ಸಂಘಟನೆಗಳು ಕೋಲಾರ, ಚಿಕ್ಕಬಳ್ಳಾಪುರ, ಹಾವೇರಿ, ಬಾಗಲಕೋಟೆ, ಬೆಂಗಳೂರು ಹೊರವಲಯ, ದಾವಣಗೆರೆ, ದೇವನಹಳ್ಳಿ, ತುಮಕೂರು ರಸ್ತೆ, ಚಿತ್ರದುರ್ಗ, ಹಿರಿಯೂರು, ರಾಯಚೂರು, ಧಾರವಾಡ ಸೇರಿದಂತೆ ಅನೇಕ ಕಡೆ ಹೆದ್ದಾರಿಗಳಿಗೆ ಕಲ್ಲುಗಳನ್ನು ಇಟ್ಟು, ಚಕ್ಕಡಿಗಳನ್ನು ಅಡ್ಡವಿಟ್ಟು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕೆಲವಡೆ ಬೆಳಗ್ಗೆ 6 ಗಂಟೆಗೆ ರಸ್ತೆ ತಡೆ ನಡೆಸಿದರೆ, ಮತ್ತೆ ಕೆಲವೆಡೆ 8 ಗಂಟೆಗೆ ರೈತರು ರಸ್ತೆ ತಡೆ ನಡೆಸಿದರು.ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ದಿಢೀರೆಂದು ಗಿರೀಶ್ ಕಾರ್ನಾಡರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರೈತರು ಪ್ರತಿಭಟನಾ ಸ್ಥಳದಲ್ಲೇ ಶ್ರದ್ಧಾಂಜಲಿ ಅರ್ಪಿಸಿ ಪ್ರತಿಭಟನೆಯನ್ನು ಮುಂದುವರೆಸಿದರು.
ಯಾವುದೇ ಕಾರಣಕ್ಕೂ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು. ಹೊಸ ಭೂಸ್ವಾಧೀನ ಕಾಯ್ದೆ ರೈತರಿಗೆ ಮಾರಕವಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಕೆಲ ಬೇಡಿಕೆಗಳು:
* ಭೂಸ್ವಾಧೀನ ಕಾಯ್ದೆಯ ತಿದ್ದುಪಡಿ ಕೈಬಿಡಬೇಕು.
* ರೈತರ ಸಾಲ ಮನ್ನಾ ಆಗಬೇಕು, ಬರ ಪರಿಹಾರ ಸಿಗಬೇಕು.
* ಬಳ್ಳಾರಿಯಲ್ಲಿ ಜಿಂದಾಲ್ಗೆ ನೀಡಲಾದ ಭೂಪರಭಾರೆಯನ್ನು ಹಿಂಪಡೆಯಬೇಕು.
* ರೈತರಿಗೆ ಕಬ್ಬಿನ ಬಾಕಿ ಹಣ ತತ್ಕ್ಷಣ ನೀಡಬೇಕು.
ಕಾಯ್ದೆಯ ತಿದ್ದುಪಡಿ ಏನು?
ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿದ್ದ ಭೂಸ್ವಾಧೀನದ ಕಾಯ್ದೆಯ ಪ್ರಕಾರ, ರೈತರ ಜಮೀನು ಸ್ವಾಧೀನಪಡಿಸಿಕೊಳ್ಳಲು ಅವರ ಅನುಮತಿ ಕಡ್ಡಾಯವಿರಬೇಕು; ರೈತರಿಗೆ ಮಾರುಕಟ್ಟೆ ದರದಲ್ಲಿ ಪರಿಹಾರ ಹಣ ನೀಡಬೇಕು; ಪರಿಹಾರ ಹಣ ತೃಪ್ತಿಕರವಾಗದಿದ್ದರೆ ರೈತರು ನ್ಯಾಯಾಲಯದ ಮೊರೆ ಹೋಗಬಹುದಾದ ಅವಕಾಶ ಕಾಯ್ದೆಯಲ್ಲಿ ನೀಡಲಾಗಿತ್ತು. ಆದರೆ, ಈ ಕಾಯ್ದೆಯ ಕೆಲ ಪ್ರಮುಖ ಅಂಶಗಳನ್ನು ಕುಮಾರಸ್ವಾಮಿ ಸರಕಾರ ಕೈಬಿಟ್ಟು ತಿದ್ದುಪಡಿ ತರಲು ಹೊರಟಿದೆ ಎಂಬುದು ರೈತ ಸಂಘಟನೆಗಳ ಆಕ್ರೋಶವಾಗಿದೆ.
ಸಾಲ ಮನ್ನಾ:
ರಾಜ್ಯ ಸರಕಾರವು ಸಹಕಾರ ಬ್ಯಾಂಕುಗಳಲ್ಲಿರುವ ರೈತರ 1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಿದೆ. ಅನೇಕ ಕಡೆ ಇದು ಅನುಷ್ಠಾನಕ್ಕೆ ಬರುತ್ತಿದೆ.ಆದರೆ, ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಖಾಸಗಿ ಬ್ಯಾಂಕುಗಳಲ್ಲಿ ಸಾಲ ಪಡೆದುಕೊಂಡಿರುವ ರೈತರ ಬವಣೆಯನ್ನು ಕೇಳುವವರಿಲ್ಲವಾಗಿದೆ.ಈ ಹಣಕಾಸು ಸಂಸ್ಥೆಗಳಿಂದ ರೈತರಿಗೆ ನಿರಂತರ ನೋಟೀಸ್ ಬರುತ್ತಿದೆ.ರೈತರು ನಿತ್ಯ ಕಿರುಕುಳ ಅನುಭವಿಸುವಂತಾಗಿದೆ. ರೈತರ ಈ ಸಾಲವನ್ನೂ ಮನ್ನಾ ಮಾಡಬೇಕೆಂದು ರೈತ ಸಂಘಟನೆಗಳು ರಾಜ್ಯ ಮತ್ತು ಕೇಂದ್ರ ಸರಕಾರಗಳನ್ನು ಆಗ್ರಹಿಸುತ್ತಿವೆ.
ಇನ್ನು, ಬಳ್ಳಾರಿಯಲ್ಲಿ ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಕೊಟ್ಟಿರುವ ಕ್ರಮಕ್ಕೂ ಆಕ್ಷೇಪ ವ್ಯಕ್ತಪಡಿಸಿರುವ ರೈತರು, ರಾಜ್ಯ ಸರಕಾರ ಕೂಡಲೇ ಈ ಕ್ರಮವನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತಿವೆ.