ಬೆಂಗಳೂರು, ಜೂ.10- ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದರೆ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಪ್ರಮೇಯವೇ ಬರುವುದಿಲ್ಲ.
ಹೀಗಾಗಿ ಕೂಡಲೇ ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವಂತೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಪಾಲಿಕೆ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ.
ಆಯುಕ್ತರನ್ನು ಭೇಟಿಯಾಗಿ ತೆರಿಗೆ ವ್ಯಾಪ್ತಿಗೆ ತರುವ ಆಸ್ತಿಗಳ ದಾಖಲೆ ಹಾಗೂ ಮನವಿ ಪತ್ರ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ 16 ಲಕ್ಷ ವಸತಿ ಕಟ್ಟಡ, 6 ಲಕ್ಷ ವಾಣಿಜ್ಯ ಕಟ್ಟಡ, 1.10 ಲಕ್ಷ ಕೈಗಾರಿಕಾ ಕಟ್ಟಡ, 3800 ಶಾಲಾ ಕಟ್ಟಡ, 50ಕ್ಕಿಂತಲೂ ಹೆಚ್ಚು ಯುನಿಟ್ ಹೊಂದಿರುವ 22 ಸಾವಿರ ವಸತಿ ಸಮುಚ್ಛಯ, 12,860 ಪಿಜಿ ಹಾಸ್ಟೆಲ್, 3758 ಐಟಿ ಕಂಪೆನಿಗಳು, 94 ಬಿಟಿ ಕಂಪೆನಿಗಳು, 79 ಟೆಕ್ಪಾರ್ಕ್, 157 ಮಾಲ್ಗಳು, 2446 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, 3350 ಲಾಡ್ಜ್, 684 ಸ್ಟಾರ್ ಹೊಟೇಲ್, 1300 ಕಲ್ಯಾಣ ಮಂಟಪಗಳು, 1600 ಪಾರ್ಟಿ ಹಾಲ್ಗಳು ಹಾಗೂ 13,860 ಟೆಲಿಕಾಂ ಟವರ್ಗಳಿವೆ.
ಈ ಎಲ್ಲ ಆಸ್ತಿಗಳಿಂದ ನ್ಯಾಯಯುತವಾಗಿ ಆಸ್ತಿ ತೆರಿಗೆ ಸಂಗ್ರಹ ಮಾಡಲು ಕ್ರಮ ಕೈಗೊಂಡರೆ ಪ್ರತಿ ವರ್ಷ ಕನಿಷ್ಠ 6 ಸಾವಿರ ಕೋಟಿ ಹೆಚ್ಚುವರಿ ಆದಾಯ ಬರುತ್ತದೆ.
ಅಲ್ಲದೆ, ಕೆಲವು ಅಪಾರ್ಟ್ಮೆಂಟ್ಗಳು, ಟೆಕ್ಪಾರ್ಕ್ಗಳು ತಮ್ಮ ಕಟ್ಟಡಗಳ ವಿಸ್ತೀರ್ಣದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಈ ಕಟ್ಟಡಗಳನ್ನು ಟೋಟಲ್ ಸ್ಟೇಷನ್ ಸರ್ವೆಗೆ ಒಳಪಡಿಸಿದರೆ ಅವುಗಳಿಂದಲೂ ಕನಿಷ್ಠ 6 ಸಾವಿರ ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹ ಮಾಡಬಹುದಾಗಿದೆ.
2014-15ನೆ ಸಾಲಿನಲ್ಲಿ ಮೂರು ಕಟ್ಟಡಗಳನ್ನು ಟೋಟಲ್ ಸ್ಟೇಷನ್ ಸರ್ವೆಗೆ ಒಳಪಡಿಸಿದಾಗ ಸುಮಾರು 8 ಕೋಟಿಯಷ್ಟು ತೆರಿಗೆ ವಂಚನೆ ಮಾಡಿರುವುದು ಬಹಿರಂಗಗೊಂಡಿತ್ತು. ಹೀಗಾಗಿ ನಗರದ ನಾಗರಿಕರ ಮೇಲೆ ಆಸ್ತಿ ತೆರಿಗೆ ಹೆಚ್ಚಳದ ಚಾಟಿ ಬೀಸುವ ಬದಲು ಎಲ್ಲ ಆಸ್ತಿಗಳಿಂದ ಕಾನೂನು ರೀತಿ ತೆರಿಗೆ ಸಂಗ್ರಹಿಸಲು ದಿಟ್ಟ ಹೆಜ್ಜೆ ಇಡಬೇಕು ಹಾಗೂ ಕಂದಾಯ ಇಲಾಖೆಯ ಕೆಲ ಭ್ರಷ್ಟ ಅಧಿಕಾರಿಗಳ ಚಿತಾವಣೆಯಿಂದ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ 3 ಲಕ್ಷ ಹೆಚ್ಚು ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಗಮನ ಹರಿಸಬೇಕೆಂದು ರಮೇಶ್ ಮನವಿ ಮಾಡಿಕೊಂಡಿದ್ದಾರೆ.