ಬೆಂಗಳೂರು,ಜೂ.9- ಈ ಬಾರಿಯ ಮುಂಗಾರು ಆರಂಭದಲ್ಲೇ ದುರ್ಬಲವಾಗಿದ್ದು, ರಾಜ್ಯ ಪ್ರವೇಶಿಸಲು ಇನ್ನು ಮೂರು ದಿನ ಬೇಕಾಗಬಹುದು ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.
ನಿನ್ನೆ ಕೇರಳ ಕರಾವಳಿಯನ್ನು ಮುಂಗಾರು ಪ್ರವೇಶಿಸಿದೆ ಆದರೆ ಅಲ್ಲೂ ಕೂಡ ದೊಡ್ಡ ಪ್ರಮಾಣದ ಮಳೆಯಾಗದೆ ದುರ್ಬಲವಾಗಿದೆ. ಈ ನಡುವೆ ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಗುಜರಾತ್ ಕಡೆಗೆ ಮುನ್ನೆಡೆಯುತ್ತಿದೆ ಎಂದು ತಿಳಿಸಿದರು.
ವಾಯುಭಾರ ಕುಸಿತ ಪ್ರಬಲಗೊಂಡು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಗಳಿದ್ದು, ಹಾಗೇನಾದರೂ ಆದರೆ ಮುಂಗಾರು ಮತ್ತಷ್ಟು ದುರ್ಬಲಗೊಳ್ಳುತ್ತಿದೆ.
ಕರಾವಳಿ ಭಾಗದಲ್ಲಿ ಮಾತ್ರ ಮಳೆಯಾಗುವ ಸಾಧ್ಯತೆಗಳಿವೆ. ಪೂರ್ವ ಮುಂಗಾರು ಕೂಡ ರಾಜ್ಯದಲ್ಲಿ ದುರ್ಬಲಗೊಂಡಿದೆ. ಕೆಲವೆಡೆ ಚದುರಿದಂತೆ ಸಾಧಾರಣ ಮಳೆ ಮಾತ್ರ ಮುಂದುವರೆಯುತ್ತಿದೆ.
ಈಗಾಗಲೇ ಒಂದು ವಾರ ಕಾಲ ಮುಂಗಾರು ತಡವಾಗಿದೆ. ಈ ವೇಳೆಗಾಗಲೇ ಮುಂಗಾರು ರಾಜ್ಯ ಪ್ರವೇಶಿಸಬೇಕಿತ್ತು. ರಾಜ್ಯದಲ್ಲೂ ಉತ್ತಮ ಮಳೆಯಾಗಬೇಕಿತ್ತು.
ಪೂರ್ವ ಮುಂಗಾರು ಮಳೆಯೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಬರಲಿಲ್ಲ. ಆರಂಭದಲ್ಲೇ ದುರ್ಬಲಗೊಂಡಿರುವ ಮುಂಗಾರು ಚೇತರಿಕೆಯಾಗುವವರೆಗೂ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳು ಇಲ್ಲ ಎಂದು ಅವರು ಹೇಳಿದರು.