ತೀವ್ರ ಕುತೂಹಲ ಕೆರಳಿಸಿರುವ ಸಚಿವ ಸಂಪುಟ ವಿಸ್ತರಣೆ

ಬೆಂಗಳೂರು,ಜೂ.9- ಜೂನ್ 12ರಂದು ನಡೆಯಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಯಲ್ಲಿ ಯಾರ್ಯಾರಿಗೆ ಅವಕಾಶ ದೊರೆಯಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಮೈತ್ರಿ ಸರ್ಕಾರವನ್ನು ಸುಭದ್ರಗೊಳಿಸಲು ಖಾಲಿ ಇರುವ ಮೂರು ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಾಗಿದ್ದಾರೆ.

ಜೆಡಿಎಸ್ ಪಾಲಿನ ಎರಡು ಹಾಗೂ ಕಾಂಗ್ರೆಸ್‍ನ ಒಂದು ಸಚಿವ ಸ್ಥಾನ ಖಾಲಿ ಉಳಿದಿವೆ. ಪಕ್ಷೇತರ ಶಾಸಕರಾದ ನಾಗೇಶ್ ಮತ್ತು ಆರ್.ಶಂಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಈಗಾಗಲೇ ಉಭಯ ಪಕ್ಷಗಳ ನಾಯಕರು ಸಮ್ಮತಿಸಿರುವುದರಿಂದ ಅವರಿಬ್ಬರಿಗೂ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಲಿನ ತಲಾ ಒಂದು ಸಚಿವ ಸ್ಥಾನವನ್ನು ಪಕ್ಷೇತರರಿಗೆ ನೀಡಲಾಗುತ್ತದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಉಳಿದ ಒಂದು ಸ್ಥಾನವನ್ನು ಜೆಡಿಎಸ್, ಕಾಂಗ್ರೆಸ್‍ಗೆ ಬಿಟ್ಟು ಕೊಡಲಿದೆಯೇ ಅಥವಾ ತನ್ನಲ್ಲಿಯೇ ಉಳಿಸಿಕೊಳ್ಳಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಸಂಪುಟಕ್ಕೆ ಯಾವ ಶಾಸಕರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.

ಜೆಡಿಎಸ್‍ನಲ್ಲಿ ಒಕ್ಕಲಿಗ, ಲಿಂಗಾಯಿತ ಹಾಗೂ ಕುರುಬ ಸಮುದಾಯಗಳಿಗೆ ಸಚಿವ ಸ್ಥಾನ ಸಿಕ್ಕಿವೆ. ಆದರೆ ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆತಿಲ್ಲ.

ಕಳೆದ ಬಾರಿ ಸಂಪುಟ ವಿಸ್ತರಣೆಯಾದ ಸಂದರ್ಭದಲ್ಲಿ ಖಾಲಿಯಾದ ಎರಡು ಸಚಿವ ಸ್ಥಾನಗಳ ಪೈಕಿ ಒಂದು ಅಲ್ಪಸಂಖ್ಯಾತರಿಗೆ ಮತ್ತು ದಲಿತರಿಗೆ ನೀಡುವ ಬಗ್ಗೆ ಚರ್ಚೆಯಾಗಿತ್ತು.

ಲೋಕಸಭೆ ಚುನಾವಣಾ ಫಲಿತಾಂಶದ ನಂತರ ಸಂಪುಟ ವಿಸ್ತರಣೆ ಮಾಡಲಾಗುತ್ತಿದ್ದು, ಜೆಡಿಎಸ್ ಶಾಸಕರಿಗೆ ಸಚಿವ ಸ್ಥಾನ ದೊರೆಯುವುದು ಇನ್ನು ಖಾತ್ರಿಯಾಗಿಲ್ಲ.

ಅಲ್ಪಸಂಖ್ಯಾತರ ಕೋಟಾದಡಿ ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಖ್ ಅವರ ಹೆಸರು ಕೇಳಿಬರುತ್ತಿದ್ದರೆ, ಪರಿಶಿಷ್ಟ ಸಮುದಾಯದಿಂದ ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ, ಶಾಸಕ ಕೆ.ಅನ್ನದಾನಿ ಸೇರಿದಂತೆ ಹಲವು ಹೆಸರುಗಳು ಪ್ರಸ್ತಾಪವಾಗುತ್ತಿವೆ.

ಮಾಜಿ ಸಚಿವರಾದ ಬಸವರಾಜ್ ಹೊರಟ್ಟಿ, ಬಿ.ಸತ್ಯನಾರಾಯಣ್ ಸೇರಿದಂತೆ ಹಲವು ಆಕಾಂಕ್ಷಿಗಳು ಇದ್ದಾರೆ. ಈ ನಡುವೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಂಪುಟ ವಿಸ್ತರಣೆ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ಆದರೂ ಜೆಡಿಎಸ್ ವರಿಷ್ಠರು ಸಂಪುಟಕ್ಕೆ ಯಾರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಹೀಗಾಗಿ ಜೆಡಿಎಸ್‍ನಲ್ಲೂ ಬಹಳಷ್ಟು ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕ ವಿಶ್ವನಾಥ್, ತಾವು ಸಚಿವ ಸ್ಥಾನ ನೀಡಿ ಎಂದು ಕೇಳುವುದಿಲ್ಲ. ಯಾರಿಗೆ ಆತುರವಿದೆಯೋ ಅವರನ್ನು ಮೊದಲು ಸಚಿವರನ್ನಾಗಿ ಮಾಡಲಿ. ಸಚಿವ ಸ್ಥಾನದ ಜವಾಬ್ದಾರಿಯನ್ನು ವರಿಷ್ಠರು ನೀಡಿದರೆ ನಿರ್ವಹಿಸಲು ಸಿದ್ಧ ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠರು ಕೈಗೊಳ್ಳುವ ನಿರ್ಧಾರ ತೀವ್ರ ಕುತೂಹಲ ಕೆರಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ