ಬೆಂಗಳೂರು,ಜೂ.9- ಯಾವುದೇ ಲೇಖನ ಬರೆಯುವ ಮೊದಲು ಆ ವಿಷಯದ ಬಗ್ಗೆ ಪೂರ್ವ ಸಿದ್ಧತೆ ಹಾಗೂ ಅಧ್ಯಯನ ಮುಖ್ಯ ಎಂದು ಸಾಹಿತಿ ನಾಡೋಜ ಪ್ರೊ.ನಿಸಾರ್ ಅಹಮದ್ ತಿಳಿಸಿದರು.
ವಾಡಿಯಾ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ಸಾವಣ್ಣ ಶತಕ ಸಂಭ್ರಮ ಮತ್ತು ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಹಿಂದೆ ಸಾಂಪ್ರದಾಯಿಕ ಬರಹಗಳು ಮಾತ್ರ ಬರುತ್ತಿದ್ದವು ಆದರೆ ಈಗ ಬರವಣಿಗೆ ಶೈಲಿ ಬದಲಾಗಿದೆ ಎಂದರು.
ಸಾಫ್ಟ್ವೇರ್ ಇಂಜಿನಿಯರ್ಗಳು ಸೇರಿದಂತೆ ಇನ್ನಿತರರು ವಿವಿಧ ವಿಷಯಗಳ ಬಗ್ಗೆ ಲೇಖನಗಳನ್ನು ಹೊರತರುತ್ತಿದ್ದಾರೆ. ಹೀಗಾಗಿ ಇಂದಿನ ತಲೆಮಾರಿಗೆ ಬೇಕಾಗುವಂತಹ ಸಾಹಿತ್ಯ ರಚನೆ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.
ಇಂದಿನ ಯುವಪೀಳಿಗೆಗೆ ತಕ್ಕಂತೆ ಸಾಹಿತ್ಯ ರಚನೆ ಮಾಡಿದರೆ ಯಶಸ್ಸು ಗಳಿಸಲು ಸಾಧ್ಯ. ಯಾವುದೇ ಲೇಖಕವನ್ನು ಬರೆಯುವ ಮೊದಲು ಸಿದ್ಧತೆ ಮಾಡಿಕೊಂಡರೆ ಯಶಸ್ವಿ ಮತ್ತು ಪ್ರಿಯವಾದ ಸಾಹಿತ್ಯ ಮೂಡಿಬರಲು ಸಾಧ್ಯ ಎಂದರು.
ಪೂರ್ಣಪ್ರಮಾಣದ ಓದುಗರಾದರೆ ಮಾತ್ರ. ಕನ್ನಡ ಸಾಹಿತ್ಯ ಪರಂಪರೆ ಅಭಿವೃದ್ಧಿಯಾಗಲು ಸಾಧ್ಯ.ಪುಸ್ತಕ ಮಾರಾಟದ ಹೊಸತನವನ್ನು ಕಂಡುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಲೇಖಕರು ಮೊದಲು ಪ್ರತಿದಿನ ಪುಸ್ತಕಗಳನ್ನು ಓದುವಂತಾಗಬೇಕು. ಆಗ ಮಾತ್ರ ಒಳ್ಳೆಯ ಕೃತಿಗಳು ಹೊರಬರಲು ಸಾಧ್ಯ ಎಂದು ಪತ್ರಕರ್ತ ವಿಶ್ವೇಶ್ವರ ಭಟ್ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಪುಸ್ತಕಗಳನ್ನು ಬರೆದರೆ ಮಾರಾಟವಾಗುವುದಿಲ್ಲ ಎಂಬ ಪರಿಸ್ಥಿತಿ ಇದೆ ಎಂಬುದು ಸುಳ್ಳು. ಓದುಗರ ಸಂಖ್ಯೆ ಹೆಚ್ಚಾಗಿದೆ.ಆದರೆ ಪುಸ್ತಕ ತಲುಪಿಸುವ ಕೆಲಸವಾಗುತ್ತಿಲ್ಲ ಎಂದರು.
ನಗರದ ಒಂದೊಂದು ಬಡಾವಣೆಯಲ್ಲೂ ಸಹ ವೈನ್ಶಾಪ್ಗಳು ಇವೆ. ಆದರೆ ಪುಸ್ತಕಗಳನ್ನು ಕೊಂಡುಕೊಳ್ಳಲು ಬಹಳ ದೂರ ಹೋಗಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೇಖಕರಾದ ಶ್ರೀಜೋಗಿ, ಸುರೇಶ್ ಪದ್ಮನಾಭನ್, ಪತ್ರಕರ್ತರಾದ ರವಿ ಹೆಗಡೆ, ಶ್ರೀವತ್ಸ ನಾಡಿಗ ಸೇರಿದಂತೆ ಮತ್ತಿತರರು ಇದ್ದರು.