ಬೆಂಗಳೂರು,ಜೂ.9- ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವಂತೆಶಾಸಕ ಎಚ್.ವಿಶ್ವನಾಥ್ ಅವರ ಮನ ಒಲಿಸುವ ಪ್ರಯತ್ನ ಮುಂದುವರೆದಿದ್ದು, ಒಂದು ವೇಳೆ ಅವರು ತಮ್ಮ ನಿಲುವು ಬದಲಿಸದಿದ್ದರೆ ಮಾಜಿ ಶಾಸಕ ಮಧುಬಂಗಾರಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆಗಳಿವೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಶ್ವನಾಥ್ ಅವರ ಮನವೊಲಿಸಿ ಅದೇ ಸ್ಥಾನದಲ್ಲಿ ಮುಂದುವರೆಸುವ ಅಪೇಕ್ಷೆಯನ್ನು ಜೆಡಿಎಸ್ ವರಿಷ್ಠರು ಹೊಂದಿದ್ದಾರೆ. ಆದರೆ ಇದುವರೆಗೂ ವಿಶ್ವನಾಥ್‍ರವರು ತಮ್ಮ ನಿಲುವು ಬದಲಿಸಿಲ್ಲ ಹಾಗೂ ಇದುವರೆಗೂ ರಾಜೀನಾಮೆಯನ್ನು ಹಿಂಪಡೆದಿಲ್ಲ.
ವರಿಷ್ಠರ ಮನವೊಲಿಕೆಯ ನಂತರವೂ ವಿಶ್ವನಾಥ್ ತಮ್ಮ ನಿಲುವಿಗೆ ಅಂಟಿಕೊಂಡರೆ ರಾಜ್ಯಾಧ್ಯಕ್ಷ ಸ್ಥಾನವನ್ನು ಬೇರೆಯವರಿಗೆ ನೀಡುವ ನಿರ್ಧಾರ ಮಾಡಲಾಗುತ್ತದೆ.ಈ ರಾಜೀನಾಮೆ ವಿಚಾರ ಇತ್ಯರ್ಥವಾಗುವವರೆಗೂ ಹೊಸಬರ ನೇಮಕದ ಪ್ರಸ್ತಾಪವಾಗುವುದಿಲ್ಲ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ವಿಶ್ವನಾಥ್ ಮನಸ್ಸು ಬದಲಿಸಿ ಮುಂದುವರೆಯುತ್ತಾರೆಂಬ ವಿಶ್ವಾಸದಲ್ಲಿದ್ದಾರೆ.ಇನ್ನು ಕೆಲವು ದಿನ ಕಾದು ನೋಡುವ ನಿರ್ಧಾರಕ್ಕೆ ವರಿಷ್ಠರು ಬಂದಿದ್ದಾರೆ.
ವಿಶ್ವನಾಥ್ ಅವರು ತಮ್ಮ ನಿಲುವಿಗೆ ಅಂಟಿಕೊಂಡಿದ್ದಾದರೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ಮಾಜಿ ಶಾಸಕ ಮಧುಬಂಗಾರಪ್ಪನವರಿಗೆ ನೀಡುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷದ ಯುವ ಘಟಕದಲ್ಲಿ ಈಗಾಗಲೇ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿರುವ ಮಧುಬಂಗಾರಪ್ಪ ಅವರಿಂದ ಪಕ್ಷ ಸಂಘಟನೆಗೆ ಹೆಚ್ಚಿನ ಅನುಕೂಲವಾಗಲಿದೆ.ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಯುವಕರನ್ನು ಆಕರ್ಷಿಸಿ ಸಂಘಟನೆ ಮಾಡುವ ಸಾಮಥ್ರ್ಯವಿದೆ ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಾಗೂ ಕಳೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದಾರೆ. ಚುನಾವಣೆಗೆ ನಿಲ್ಲಲು ಮಧುಬಂಗಾರಪ್ಪ ಹಿಂಜರಿದಾಗ ಪಕ್ಷದ ನಾಯಕರೇ ಧೈರ್ಯ ತುಂಬಿ ಕಣಕ್ಕಿಳಿಸಿದ್ದರು.
ಈಗ ಮತ್ತೆ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ.ಎಲ್ಲವೂ ವಿಶ್ವನಾಥ್ ಅವರ ನಿರ್ಧಾರದ ಮೇಲೆ ಅವಲಂಬಿತವಾಗಿದೆ.
ಅನುಭವಿ ರಾಜಕಾರಣಿ ಹಾಗೂ ಹಿಂದುಳಿದ ನಾಯಕರೂ ಆಗಿರುವ ವಿಶ್ವನಾಥ್ ಅವರ ಮಾರ್ಗದರ್ಶನ ಪಕ್ಷಕ್ಕೆ ಬೇಕಾಗಿದೆ ಎಂದು ಶಾಸಕರು, ಮುಖಂಡರು, ಸಚಿವರು ಅಭಿಪ್ರಾಯವನ್ನು ವ್ಯಕ್ತಪಡಿಸಿ ರಾಜ್ಯಾಧ್ಯಕ್ಷ ಸ್ಥಾನದಲ್ಲೇ ಮುಂದುವರೆಯುವಂತೆ ಮನವಿ ಮಾಡಿದ್ದರು. ಇದಕ್ಕೆ ವಿಶ್ವನಾಥ್ ಸಮ್ಮತಿಸದೆ ತಮ್ಮ ನಿಲುವಿಗೆ ಅಂಟಿಕೊಂಡಿದ್ದರು.