ಒಳಜಗಳದಿಂದಲೇ ಮೈತ್ರಿ ಸರ್ಕಾರ ಪತನವಾಗಲಿದೆ-ಕೇಂದ್ರ ಸಚಿವ ಸದಾನಂದಗೌಡ

ಬೆಂಗಳೂರು, ಜೂ.9-ಸಚಿವ ಸಂಪುಟ ವಿಸ್ತರಣೆಯೇ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಬೀಳಲು ಅಡಿಗಲ್ಲಾಗಲಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಿತ್ರ ಪಕ್ಷಗಳಲ್ಲಿನ ಒಳಜಗಳದಿಂದಲೇ ಸರ್ಕಾರ ಪತನವಾಗಲಿದೆ.ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಮಾಡುತ್ತಿರುವ ಸಂಪುಟ ವಿಸ್ತರಣೆಯಂತಹ ಸಾಹಸವೇ ಸರ್ಕಾರವನ್ನು ಮುಳುಗಿಸಲಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಕುಡಿಯುವ ನೀರಿನ ಸಮಸ್ಯೆ ಇದೆ. ಆದರೂ ರಾಜ್ಯಸರ್ಕಾರ ಗಂಭೀರವಾಗಿ ಪರಿಗಸಿಲ್ಲ. ಸರ್ಕಾರದ ಹಾಗೂ ಮಿತ್ರ ಪಕ್ಷಗಳಿಂದ ಬಡವರ ಜೀವನ ದುಸ್ತರವಾಗುತ್ತಿದೆ ಎಂದು ಆರೋಪಿಸಿದರು.

ಇದರಿಂದಾಗಿಯೇ ಲೋಕಸಭೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್-ಜೆಡಿಎಸ್‍ನ್ನು ತಿರಸ್ಕರಿಸಿದ್ದಾರೆ ಎಂದರು.

ಮತ ನೀಡಿಲ್ಲ ಎಂಬ ಕಾರಣಕ್ಕೆ ಮತದಾರರ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ಇದೇ ಸಂದರ್ಭದಲ್ಲಿ ತಿರುಗೇಟು ನೀಡಿದರು.

ಕೇರಳದವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ ನೀಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಆದರೂ ಪ್ರಧಾನಿಯವರು ಕೇರಳದ ಜನರ ಬಗ್ಗೆ ಆ ರೀತಿ ಮಾತನಾಡಿದ್ದಾರೆಯೇ. ಭಾರತ ಮೊದಲು ಎನ್ನುವ ಭಾವನೆ ಇರಬೇಕು ಎಂದರು.

ಮಂಡ್ಯ ಸಂಸದೆ ಸುಮಲತಾ ಅವರನ್ನು ನೋಡಿಯಾದರೂ ರಾಜಕೀಯದಲ್ಲಿ ಪ್ರಬುದ್ಧತೆಯನ್ನು ಜೆಡಿಎಸ್‍ನವರು ಕಲಿಯಬೇಕಿದೆ ಎಂದು ಹೇಳಿದರು.

ಸುಸಜ್ಜಿತ ಆಸ್ಪತ್ರೆ:
ಉತ್ತರಕನ್ನಡ ಜಿಲ್ಲೆಗೆ ಸೂಪರ್‍ಸ್ಪೆಷಾಲಿಟಿ ಆಸ್ಪತ್ರೆ ಬೇಕಾಗಿದ್ದು, ಈ ಸಂಬಂಧ ಕೇಂದ್ರ ಆರೋಗ್ಯ ಸಚಿವರೊಂದಿಗೆ ಸಮಾಲೋಚನೆ ನಡೆಸುವುದಾಗಿ ಅವರು ತಿಳಿಸಿದರು.

ಕೇಂದ್ರ ಸರ್ಕಾರದ ವಿಶೇಷ ಅನುದಾನ ಬಳಸಿ ಆಸ್ಪತ್ರೆ ನಿರ್ಮಾಣಕ್ಕೆ ಒತ್ತು ನೀಡುತ್ತೇವೆ. ಉತ್ತರ ಕನ್ನಡ ಜಿಲ್ಲೆ ಪಶ್ಚಿಮ ಘಟ್ಟಗಳನ್ನು ಒಳಗೊಂಡಿದ್ದು, ಅಲ್ಲಿ ಬೇರೆ ಬೇರೆ ಕಾಯಿಲೆಗಳು ಅನ್ವಯವಾಗುತ್ತವೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ