ಬೆಂಗಳೂರು, ಜೂ. 8- ಜನರ ಕೆಲಸ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣಗೆ ಸುಮಲತಾ ಅಂಬರೀಷ್ ತಿರುಗೇಟು ನೀಡಿದ್ದಾರೆ.
ಸಚಿವ ಡಿ.ಸಿ.ತಮ್ಮಣ್ಣ ಇಂದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮದ್ದೂರಮ್ಮ ಕೆರೆಯಂಗಳದಲ್ಲಿ ಕುಡಿಯುವ ನೀರಿನ ಘಟಕದ ಶಂಕು ಸ್ಥಾಪನೆಗೆ ಬಂದಿದ್ದ ವೇಳೆ ಚರಂಡಿ ಮತ್ತು ಸಮರ್ಪಕ ರಸ್ತೆ ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು.
ಇದಕ್ಕೆ ಆಕ್ರೋಶಗೊಂಡ ತಮ್ಮಣ್ಣ , ಅವರಿಗೆ(ಸುಮಲತಾ) ಓಟ್ ಹಾಕಿ ನಮ್ಮ ಹತ್ತಿರ ಕೆಲಸ ಕೇಳೋಕೆ ನಾಚಿಕೆ ಆಗೋದಿಲ್ಲವೇ ಎಂದು ಹರಿಹಾಯ್ದರು.
ಇದಕ್ಕೆ ತಿರುಗೇಟು ನೀಡಿರುವ ಸುಮಲತಾ, ಸಚಿವ ತಮ್ಮಣ್ಣ ತಾವೊಬ್ಬ ಜನಪ್ರತಿನಿಧಿ ಎನ್ನುವುದನ್ನು ಮರೆಯಬಾರದು. ಅವರೊಬ್ಬ ಸಚಿವರು, ಜನರು ನಿಮ್ಮ ಬಳಿ ಹಣ ಕೇಳಲು, ಭಿಕ್ಷೆ ಬೇಡಲು ಬರುವುದಿಲ್ಲ. ಗ್ರಾಮದ ಕೆಲಸ ಕಾರ್ಯಗಳನ್ನು ಕೇಳಿಕೊಂಡು ಬಂದರೆ ಈ ರೀತಿಯಾಗಿ ನಡೆದುಕೊಳ್ಳವುದೇ ಎಂದು ಪ್ರಶ್ನಿಸಿದರು.
ನೀವು ಸಚಿವರಾಗಿ ಕೆಲಸ ಮಾಡಲು ಆಗದಿದ್ದರೆ, ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ.ಅರ್ಹ ವ್ಯಕ್ತಿಗಳು ಸಚಿವ ಸ್ಥಾನ ನಿಭಾಯಿಸಲು ಸಾಕಷ್ಟು ಜನರಿದ್ದಾರೆ.ಇಂತಹ ದುರಹಂಕಾರದ ಮಾತುಗಳನ್ನಾಡಿದ್ದರಿಂದಲೇ ಚುನಾವಣೆಯಲ್ಲಿ ಜನರು ನೋಡಿಕೊಳ್ಳುವಂತಹ ಪಾಠ ಕಲಿಸಿದ್ದಾರೆ. ಆದರೂ ಬುದ್ಧಿಕಲಿತಿಲ್ಲ ಎಂದರೆ, ಯಾರು ತಾನೇ ಏನು ಮಾಡಲು ಸಾಧ್ಯ ಎಂದು ಮಾರ್ಮಿಕವಾಗಿ ನುಡಿದರು.
ಜನರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಬಂದಾಗ ಸಹನೆಯಿಂದ ಅವರ ಕಷ್ಟಗಳನ್ನು ವಿಚಾರಿಸುವುದು ನಿಮ್ಮ ಕರ್ತವ್ಯ. ಅದನ್ನು ಬಿಟ್ಟು ಮತ ಹಾಕಿಲ್ಲ ಎಂದು ಕೆಲಸವನ್ನೇ ಮಾಡುವುದಿಲ್ಲ ಎಂದು ಹೇಳುವುದು ಸರಿಯಲ್ಲ.
ನೀವು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಏನು..? ವಾಗ್ದಾನ ಮಾಡಿದ್ದೀರಿ ಎಂಬುದು ನೆನಪಿದೆಯಾ? ಈಗಲಾದರು ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.