ಶಾಸಕ ರಾಮಲಿಂಗಾರೆಡ್ಡಿಯವರಿಂದ ಬಿಬಿಎಂಪಿ ಕಾರ್ಯವೈಕರಿ ಬಗ್ಗೆ ಅಸಮಾಧಾನ

ಬೆಂಗಳೂರು, ಜೂ.8- ಕಾಂಗ್ರೆಸ್‍ನಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಮಾಜಿ ಸಚಿವ ಹಾಗೂ ಶಾಸಕ ರಾಮಲಿಂಗಾರೆಡ್ಡಿ ಅವರು ಇದೀಗ ಬಿಬಿಎಂಪಿ ಕಾರ್ಯ ವೈಖರಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿ ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವುದು ಕೈ ಪಾಳಯವನ್ನು ಮತ್ತಷ್ಟು ಕಂಗೆಡಿಸಿದೆ.

ನಗರಾಭಿವೃದ್ಧಿ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಉಸ್ತುವಾರಿಯಲ್ಲಿರುವ ಬಿಬಿಎಂಪಿಯಲ್ಲಿ 246 ಕೋಟಿ ರೂ. ವೆಚ್ಚದಲ್ಲಿ ಟ್ರಾನ್ಸ್‍ಫರ್ ಸ್ಟೇಷನ್‍ಗಳ ನಿರ್ವಹಣೆಗೆ 7 ವರ್ಷಗಳ ಅವಧಿಗೆ ಟೆಂಡರ್ ನೀಡಲು ಮುಂದಾಗಿರುವ ಬಿಬಿಎಂಪಿಯ ದೋಷಪೂರಿತ ಕಾರ್ಯಾದೇಶಗಳನ್ನು ರದ್ದುಗೊಳಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ರಾಮಲಿಂಗಾರೆಡ್ಡಿ ಅವರು ಪತ್ರದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಜಿಂದಾಲ್‍ಗೆ ಭೂಮಿ ಪರಭಾರೆ ವಿಚಾರ ಕುರಿತಂತೆ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ರಾಮಲಿಂಗಾರೆಡ್ಡಿ ಅವರ ಈ ಅಸಮಾಧಾನ ಕಾಂಗ್ರೆಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಪತ್ರದಲ್ಲಿ ಏನಿದೆ?: ಬಿಬಿಎಂಪಿಯಲ್ಲಿ ನಗರಕ್ಕೆ ಇರುವ ಉದ್ಯಾನನಗರಿ ಎಂಬ ಹೆಗ್ಗಳಿಕೆಯನ್ನು ಕಾಪಾಡಲು ಹಲವಾರು ಯೋಜನೆಗಳನ್ನು ಹಾಗೂ ಘನ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಹಾಗೂ ವೈಜ್ಞಾನಿಕವಾಗಿ ರೂಪಿಸಿ ಅನುಷ್ಠಾನಕ್ಕೆ ತರಲು ಶ್ರಮಿಸುತ್ತಿರುವುದು ಹೆಮ್ಮೆಯ ವಿಷಯ.

ಆದರೆ ಬಿಬಿಎಂಪಿಯಲ್ಲಿ ಮಿನಿ ಟ್ರಾನ್ಸ್‍ಫರ್ ಸ್ಟೇಷನ್‍ಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕಾಮಗಾರಿಗೆ ಇ ಪೋರ್ಟಲ್‍ನಲ್ಲಿ ಸಮರ್ಪಕ ದಾಖಲೆ ಸಲ್ಲಿಸದಿರುವುದು, ಟೆಂಡರ್ ತಿದ್ದಿರುವುದು, ಮೆಕಾನಿಕಲ್ ಸ್ವೀಪಿಂಗ್ ಯಂತ್ರಗಳ ಸರಬರಾಜು ಹಾಗೂ ಕಾರ್ಯಾಚರಣೆ ಮಾಡಲು ಪಾರದರ್ಶಕತೆ ಕಾಯ್ದೆ ಉಲ್ಲಂಘಿಸಿ ಕಪ್ಪು ಪಟ್ಟಿಗೆ ಸೇರಿರುವ ಟಿಪಿಎಸ್ ಸಂಸ್ಥೆಯವರ ಏಕ ಬಿಡ್ ಸ್ವೀಕರಿಸಿ ಕಾರ್ಯಾದೇಶ ನೀಡಿರುವುದರ ಹಿಂದೆ ಭಾರೀ ಗೋಲ್‍ಮಾಲ್ ನಡೆದಿದೆ ಎಂಬುದನ್ನು ರೆಡ್ಡಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಜೆಗೆ ರಾಮಲಿಂಗಾರೆಡ್ಡಿ ಅವರ ದೂರಿನ ಪ್ರತಿ ಲಭ್ಯವಾಗಿದೆ.

ಈ ಕೂಡಲೇ ಮುಖ್ಯಮಂತ್ರಿಗಳು ಬಿಬಿಎಂಪಿ ಆಡಳಿತದಲ್ಲಿ ನಡೆದಿರುವ ಗೋಲ್‍ಮಾಲ್‍ಗೆ ತಡೆ ಹಾಕಬೇಕು.ಕಪ್ಪು ಪಟ್ಟಿಗೆ ಸೇರಿರುವ ಟಿಪಿಎಸ್ ಸಂಸ್ಥೆಗೆ ನೀಡಿರುವ ಟೆಂಡರ್ ಆದೇಶವನ್ನು ರದ್ದುಪಡಿಸಿ ತಪ್ಪು ಸರಿಪಡಿಸಿಕೊಳ್ಳಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ರೆಡ್ಡಿ ಅವರು ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಏನಿದು ಅವ್ಯವಹಾರ?: ಬಿಬಿಎಂಪಿ ವ್ಯಾಪ್ತಿಯ 50 ವಾರ್ಡ್‍ಗಳಲ್ಲಿ ಮಿನಿ ಟ್ರಾನ್ಸ್‍ಫರ್ ಸ್ಟೇಷನ್‍ಗಳನ್ನು ಸ್ಥಾಪಿಸಲು ಆಸಕ್ತಿ ಹೊಂದಿರುವ ಸಂಸ್ಥೆಗಳಿಂದ ಕಳೆದ ಮೇ 2017ರಂದು ಟೆಂಡರ್ ಆಹ್ವಾನಿಸಲಾಗಿತ್ತು.

ಟ್ರಾನ್ಸ್‍ಫರ್ ಸ್ಟೇಷನ್‍ಗಳನ್ನು ಸ್ಥಾಪಿಸಲು ಹಲವಾರು ಸಂಸ್ಥೆಗಳು ಬಿಡ್ ಮಾಡಿದ್ದವು. ಬಿಡ್‍ಗೆ ಕೊನೆಯ ದಿನ ಪೂರ್ಣಗೊಂಡ ಮರು ದಿನ ಟಿಪಿಎಸ್ ಸಂಸ್ಥೆಯವರು ಸಲ್ಲಿಕೆಯಾಗಿರುವ ಬಿಡ್‍ಗಳ ದಾಖಲೆಗಳನ್ನು ಅಕ್ರಮವಾಗಿ ಪಡೆದು ಬೇರೆ ಸಂಸ್ಥೆಗಳಿಗಿಂತ ಕಡಿಮೆ ದರಕ್ಕೆ ಬಿಡ್ ಮಾಡಿ ಅಕ್ರಮವೆಸಗಿದ್ದಾರೆ.

ಅಲ್ಲದೆ ಬಿಡ್‍ದಾರರ ಸಭೆಯಲ್ಲೂ ಕೆಲವು ಅಧಿಕಾರಿಗಳು ಟಿಪಿಎಸ್ ಸಂಸ್ಥೆಗೆ ಅನುಕೂಲವಾಗುವಂತೆ ದಾಖಲೆಗಳನ್ನು ಸೃಷ್ಟಿಸಿದ್ದಾರೆ.ಕೆಟಿಪಿಪಿ ಕಾಯ್ದೆಯನ್ವಯ 2 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೌಲ್ಯದ ಟೆಂಡರ್‍ಗಳಿಗೆ 60 ದಿನಗಳ ಸಮಯಾವಕಾಶ ನೀಡಬೇಕು.ಆದರೆ ಈ ಪ್ರಕರಣದಲ್ಲಿ ಅಧಿಕಾರಿಗಳು ಕಾಯ್ದೆಯನ್ನು ಉಲ್ಲಂಘಿಸಿ ಟಿಪಿಎಸ್ ಸಂಸ್ಥೆಯವರಿಗೆ ಅನುಕೂಲ ಮಾಡಿಕೊಟ್ಟಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ.

ಮಾತ್ರವಲ್ಲ ಟಿಪಿಎಸ್ ಸಂಸ್ಥೆಯ ಏಕ ಮಾತ್ರ ಬಿಡ್ ಅನ್ನು ಅಂಗೀಕರಿಸಿ ಪಾರದರ್ಶಕ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ.ಟೆಂಡರ್ ಷರತ್ತು ನಿಬಂಧನೆಗಳನ್ನು ಸಂಸ್ಥೆಯವರು ಉಲ್ಲಂಘಿಸಿದರೂ ಅದನ್ನು ಸಂಬಂಧಪಟ್ಟ ಅಭಿಯಂತರರು ಮರೆ ಮಾಚಿ ದಸ್ತಾವೇಜನ್ನು ಸಲ್ಲಿಸಿರುತ್ತಾರೆ.

ಯಾವುದೇ ಟೆಂಡರ್ ಪ್ರಕ್ರಿಯೆಯಲ್ಲಿ ನಿಬಂಧನೆ ಉಲ್ಲಂಘಿಸಿದರೆ ಅಂತಹ ಟೆಂಡರ್ ಅನ್ನು ತಿರಸ್ಕರಿಸಿ ತಪ್ಪಿತಸ್ಥ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಇಎಂಡಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾನೂನಿನ ಅವಕಾಶವಿದೆ.

ಯಾವುದೇ ಟೆಂಡರ್ ಪ್ರಕ್ರಿಯೆಯಲ್ಲಿ ಕಪ್ಪು ಪಟ್ಟಿಗೆ ಸೇರಿದ ಸಂಸ್ಥೆಗೆ ಬಿಡ್ ನೀಡಬಾರದು ಎಂಬ ನಿಯಮವಿದೆ.ಆದರೆ ಟಿಪಿಎಸ್ ಸಂಸ್ಥೆಯನ್ನು ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಅವರು 2016ರಲ್ಲೇ ಕಪ್ಪು ಪಟ್ಟಿಗೆ ಸೇರಿಸಿದ್ದಾರೆ.

ಇಷ್ಟೆಲ್ಲಾ ಅಕ್ರಮವೆಸಗಿರುವ ಟಿಪಿಎಸ್ ಸಂಸ್ಥೆಗೆ ಟ್ರಾನ್ಸ್‍ಫರ್ ಸ್ಟೇಷನ್‍ಗಳನ್ನು 7 ವರ್ಷಗಳವರೆಗೆ ಕಾರ್ಯಾಚರಣೆ ನಡೆಸಲು ಮತ್ತು ನಿರ್ವಹಣೆ ಮಾಡಲು 246 ಕೋಟಿ ರೂ.ಗಳ ಕಾಮಗಾರಿ ನೀಡಿರುವುದು ಯಾವ ಪುರುಷಾರ್ಥಕ್ಕೆ ಎಂದು ರಾಮಲಿಂಗಾರೆಡ್ಡಿ ಅವರು ಪ್ರಶ್ನಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ