ಜೂ.12ರಂದು ನಡೆಯಲಿರುವ ರಾಜ್ಯ ಸಂಪುಟ ವಿಸ್ತರಣೆ

ಬೆಂಗಳೂರು, ಜೂ.8-ಸಮ್ಮಿಶ್ರ ಸರ್ಕಾರದಲ್ಲಿ ಖಾಲಿ ಇರುವ ಮೂರು ಸ್ಥಾನಗಳಿಗೂ ಸಚಿವರನ್ನು ನೇಮಿಸಲು ಜೂ.12 ರಂದು ಸಂಪುಟ ವಿಸ್ತರಣೆ ನಡೆಯಲಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಸಮಯ ನೀಡುವಂತೆ ಮನವಿ ಮಾಡಿದ್ದಾರೆ.

ಬಹುತೇಕ ಜೂ.12 ರಂದು ಬೆಳಗ್ಗೆ 11.30ಕ್ಕೆ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದ್ದು, ಪಕ್ಷೇತರ ಶಾಸಕರಾದ ರಾಣೆಬೆನ್ನೂರಿನ ಆರ್.ಶಂಕರ್, ಮುಳಬಾಗಿಲು ಕ್ಷೇತ್ರದ ನಾಗೇಶ್ ಹಾಗೂ ರಾಮಲಿಂಗಾರೆಡ್ಡಿ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಸಂಪುಟ ವಿಸ್ತರಣೆ ಮಾಡಿದರೆ ಮೂವರಿಗೆ ಮಾತ್ರ ಅವಕಾಶ ಸಿಗಲಿದೆ. ಸಂಪುಟ ಪುನಾರಚನೆ ಮಾಡಿದರೆ ಹಲವಾರು ಮಂದಿಗೆ ಅವಕಾಶವಾಗಲಿದೆ ಎಂಬ ಒತ್ತಡಗಳು ಕೇಳಿಬರುತ್ತಿವೆ.

ಇದರ ಹೊರತಾಗಿಯೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪುನಾರಚನೆಗೆ ವಿರೋಧ ವ್ಯಕ್ತಪಡಿಸಿದ್ದು, ಸದ್ಯಕ್ಕೆ ಸಂಪುಟ ವಿಸ್ತರಣೆಯಷ್ಟೆ ಸಾಕು ಎಂದು ಪಟ್ಟು ಹಿಡಿದಿದ್ದಾರೆ.

ಸಚಿವ ಸಿ.ಎಸ್.ಶಿವಳ್ಳಿ ಅವರ ಅಕಾಲಿಕ ನಿಧನದಿಂದ ಕಾಂಗ್ರೆಸ್ ಪಾಲಿನ ಒಂದು, ಜೆಡಿಎಸ್ ಪಾಳಯದಲ್ಲಿ ಸಚಿವ ಮಹೇಶ್ ಅವರ ರಾಜೀನಾಮೆಯಿಂದ ತೆರವಾದ ಒಂದು ಮತ್ತು ಭರ್ತಿ ಮಾಡದೆ ಖಾಲಿ ಇರುವ ಮತ್ತೊಂದು ಸ್ಥಾನ ಸೇರಿ ಒಟ್ಟು ಮೂರು ಹುದ್ದೆಗಳು ಸಂಪುಟದಲ್ಲಿ ಖಾಲಿ ಇವೆ.

ಪಕ್ಷೇತರ ಶಾಸಕರು ಬಿಜೆಪಿಯತ್ತ ವಾಲಿ ಸರ್ಕಾರದ ವಿರುದ್ಧ ಬಂಡಾಯ ಚಟುವಟಿಕೆಗೆ ಪ್ರೇರೇಪಣೆಯಾಗಿದ್ದರು. ಹೀಗಾಗಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಮುಂದಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಪಕ್ಷೇತರರಿಬ್ಬರಿಗೆ ಸಚಿವ ಸ್ಥಾನ ನೀಡಲು ಮುಂದಾಗಿದ್ದಾರೆ. ಮತ್ತೊಂದು ಸ್ಥಾನಕ್ಕೆ ಯಾರನ್ನು ನೇಮಿಸಲಾಗುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ.

ಕಾಂಗ್ರೆಸ್ ಶಾಸಕರಾದ ರೋಷನ್‍ಬೇಗ್, ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್, ರಮೇಶ್ ಜಾರಕಿ ಹೊಳಿ, ಬಿ.ಸಿ.ಪಾಟೀಲ್, ಡಾ.ಕೆ.ಸುಧಾಕರ್, ಅಜಯ್‍ಸಿಂಗ್, ವಿ.ಮುನಿಯಪ್ಪ, ಅನಂದ್‍ಸಿಂಗ್, ಡಾ.ಯತೀಂದ್ರ, ರಾಘವೇಂದ್ರ ಹಿಟ್ನಾಳ್, ಪ್ರತಾಪ್‍ಗೌಡ ಪಾಟೀಲ್, ಬಿ.ಕೆ.ಸಂಗಮೇಶ್, ಭೀಮಾನಾಯಕ್ ಸೇರಿದಂತೆ ಹಲವಾರು ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಆದರೆ ಇವರ ಪೈಕಿ ರಮೇಶ್ ಜಾರಕಿ ಹೊಳಿ, ರೋಷನ್‍ಬೇಗ್, ರಾಮಲಿಂಗಾರೆಡ್ಡಿ ಅವರುಗಳು ಪಕ್ಷದ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡಿ ಈಗಾಗಲೇ ಸಾಕಷ್ಟು ಗೊಂದಲಗಳನ್ನು ಹುಟ್ಟುಹಾಕಿದ್ದಾರೆ.

ಜೆಡಿಎಸ್‍ನಲ್ಲೂ ಸಚಿವ ಸ್ಥಾನದ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಆದರೆ ಅಲ್ಲಿ ಬಂಡಾಯದ ಚಟುವಟಿಕೆಗಳು ಅಷ್ಟಾಗಿಲ್ಲ. ಹೀಗಾಗಿ ಜೆಡಿಎಸ್ ತನ್ನ ಪಾಲಿನ ಒಂದು ಸ್ಥಾನವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ