ಬೆಂಗಳೂರು,ಜೂ.8- ಉತ್ತರ ಕರ್ನಾಟಕ ಭಾಗದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೃಷ್ಣ ನದಿಗೆ ನೀರು ಹರಿಸಲು ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಮಧ್ಯಪ್ರವೇಶಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಇಂದು ಬೆಳಗ್ಗೆ ರಾಜ್ಯಪಾಲ ವಜುಭಾಯಿ ವಾಲ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ ಅವರು ಈ ವಿಷಯ ಪ್ರಸ್ತಾಪಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ಮಹದಾಯಿ ನದಿ ನೀರಿನ ವಿವಾದವನ್ನು ಬಗೆಹರಿಸಬೇಕಿದೆ, ಕೃಷ್ಣ ನದಿಗೆ ಕೊಯ್ನ ಡ್ಯಾಮ್ನಿಂದ ನೀರು ಬಿಡುವ ಸಂಬಂಧ ಮಹಾರಾಷ್ಟ್ರ ಸರ್ಕಾರದ ಜತೆ ಸಾಕಷ್ಟು ಪ್ರಯತ್ನ ನಡೆಸಲಾಗಿದೆ. ತಾವು ಮಧ್ಯಪ್ರವೇಶಿಸಿ ಅಲ್ಲಿನ ಸರ್ಕಾರದ ಜೊತೆ ಮಾತುಕತೆ ನಡೆಸಿ ನೀರು ಬಿಡಲು ಸಲಹೆ ನೀಡಬೇಕೆಂದು ಮುಖ್ಯಮಂತ್ರಿ ಕೋರಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯಪಾಲರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಈ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.