ನವದೆಹಲಿ: ಎಂಟು ಸಚಿವ ಸಂಪುಟ ಸಮಿತಿ ಪುನರ್ ರಚನೆ ವೇಳೆ ಆರಂಭದಲ್ಲಿ ಎರಡು ಸಮಿತಿಗಳಲ್ಲಿ ಮಾತ್ರ ಸ್ಥಾನ ನೀಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಕೊನೆಗೆ ಸುಮಾರು 17 ಗಂಟೆಗಳ ರಾಜಕೀಯ ನಾಟಕದ ತಿರುವು ಬಳಿಕ 6 ಸಂಪುಟ ಸಮಿತಿಗಳಲ್ಲಿ ಸದಸ್ಯತ್ವ ಸ್ಥಾನ ಸಿಕ್ಕಿದೆ.
ರಾಜನಾಥ್ ಸಿಂಗ್ ಸಂಪುಟ ತೊರೆಯಲಿದ್ದಾರೆ ಎಂದು ನಿನ್ನೆ ಸಾಯಂಕಾಲ ಕೇಳಿಬಂದ ಊಹಾಪೋಹಗಳ ಮಧ್ಯೆ ಸರ್ಕಾರ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ನಾಲ್ಕು ಸಂಪುಟ ಸಮಿತಿಗಳಲ್ಲಿ ರಾಜನಾಥ್ ಸಿಂಗ್ ಅವರಿಗೆ ಸದಸ್ಯತ್ವ ಸ್ಥಾನ ನೀಡಲಾಗಿದೆ.
ಸಾರ್ವಜನಿಕ ಮಾಹಿತಿ ವಿಭಾಗ(ಪಿಐಬಿ) ನಿನ್ನೆ ಬೆಳಗ್ಗೆ 5.57ರ ಹೊತ್ತಿಗೆ ಮೊದಲ ಪಟ್ಟಿ ಬಿಡುಗಡೆ ಮಾಡಿದಾಗ ರಾಜನಾಥ್ ಸಿಂಗ್ ಅವರ ಹೆಸರು ಭದ್ರತೆ ಮತ್ತು ಆರ್ಥಿಕ ವ್ಯವಹಾರಗಳ ಸಮಿತಿಯಲ್ಲಿ ಮಾತ್ರ ಇದ್ದಿತ್ತು. ಎಲ್ಲಾ ಎಂಟು ಸಮಿತಿಗಳಲ್ಲಿ ಸಚಿವರ ಪೈಕಿ ಅಮಿತ್ ಶಾ ಮಾತ್ರ ಸ್ಥಾನ ಹೊಂದಿದ್ದರು.
ಕೇಂದ್ರ ಸರ್ಕಾರದಲ್ಲಿ ಪ್ರಧಾನಿ ನಂತರ ಪ್ರಮಾಣವಚನ ಸ್ವೀಕರಿಸಿದವರಲ್ಲಿ ಮತ್ತು ಸರ್ಕಾರದ ಸಚಿವ ಸ್ಥಾನದಲ್ಲಿ ರಾಜನಾಥ್ ಸಿಂಗ್ ಎರಡನೇ ಸ್ಥಾನದಲ್ಲಿದ್ದರು. ನಿನ್ನೆ ರಾತ್ರಿ 10.19ರ ಹೊತ್ತಿಗೆ ಸರ್ಕಾರ ಬಿಡುಗಡೆ ಮಾಡಿದ ಪರಿಷ್ಕೃತ ಪಟ್ಟಿಯಲ್ಲಿ ರಾಜನಾಥ್ ಸಿಂಗ್ ಅವರ ಹೆಸರು ಇನ್ನೂ ನಾಲ್ಕು ಸಮಿತಿಗಳಲ್ಲಿ ಸೇರಿಸಲಾಗಿತ್ತು. ಅವುಗಳೆಂದರೆ ಸಂಸದೀಯ ವ್ಯವಹಾರ, ರಾಜಕೀಯ ವ್ಯವಹಾರ, ಹೂಡಿಕೆ ಮತ್ತು ಬೆಳವಣಿಗೆ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ. ಈ ಮೂಲಕ ಸಂಪುಟ ಸಮಿತಿಯಲ್ಲಿ ಸದಸ್ಯರ ಸ್ಥಾನಮಾನವನ್ನು ಸಮತೋಲನ ಮಾಡುವ ಪ್ರಯತ್ನವನ್ನು ಪ್ರಧಾನಿ ಮಾಡಿದರು.
ಇದೀಗ ರಾಜನಾಥ್ ಸಿಂಗ್ ಅವರು ಸದಸ್ಯತ್ವ ಹೊಂದದಿರುವುದು ನೇಮಕಾತಿ ಮತ್ತು ವಸತಿ ಸಮಿತಿ. ಈ ಎರಡೂ ಸಮಿತಿಗಳಲ್ಲಿ ಪ್ರಧಾನಿ ಮತ್ತು ಗೃಹ ಸಚಿವರು ಮಾತ್ರ ಸದಸ್ಯತ್ವ ಹೊಂದಿರುತ್ತಾರೆ. ರಾಜಕೀಯ ವ್ಯವಹಾರಗಳ ವಿಭಾಗ ಎಲ್ಲಾ ಪ್ರಮುಖ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಹಿಂದಿನ ಮೋದಿ ಸರ್ಕಾರದಲ್ಲಿ ರಾಜನಾಥ್ ಸಿಂಗ್ ಸಂಸದೀಯ ವ್ಯವಹಾರಗಳ ಸಮಿತಿಯ ಉಸ್ತುವಾರಿ ವಹಿಸಿದ್ದರು. ಸಂಸತ್ತು ಅಧಿವೇಶನಗಳನ್ನು ನಡೆಸುವುದಕ್ಕೆ ಈ ತಂಡ ದಿನಾಂಕಗಳನ್ನು ಗೊತ್ತು ಮಾಡುತ್ತದೆ.
ಇದೀಗ ರಾಜಕೀಯ ವ್ಯವಹಾರಗಳ ಹೊಸ ರಚನೆಯ ಸಮಿತಿಯಲ್ಲಿ ರಾಜನಾಥ್ ಸಿಂಗ್ ಹೊರತಾಗಿ ಹಿರಿಯ ನಾಯಕರುಗಳಾದ ಅಮಿತ್ ಶಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ನರೇಂದ್ರ ತೊಮರ್, ರವಿ ಶಂಕರ್ ಪ್ರಸಾದ್, ಹರ್ಷವರ್ಧನ್, ಪಿಯೂಷ್ ಗೋಯಲ್, ಪ್ರಹ್ಲಾದ್ ಜೋಶಿ ಮತ್ತು ಮಿತ್ರ ಪಕ್ಷಗಳಿಂದ ರಾಮ್ ವಿಲಾಸ್ ಪಾಸ್ವಾನ್, ಹರ್ಸಿಮ್ರತ್ ಕೌರ್ ಬಾದಲ್ ಮತ್ತು ಅರವಿಂದ್ ಸಾವಂತ್ ಇದ್ದಾರೆ.