ಸಿದ್ದರಾಮಯ್ಯ ಕ್ಷೇತ್ರ ಬಾದಾಮಿಯಿಂದಲೇ ಬರ ಪ್ರವಾಸ ಹೊರಟ ಬಿಎಸ್​ವೈ; ಕಳೆಕಟ್ಟಿದ ಮಾಜಿಗಳ ಕಾಳಗ

ಬಾಗಲಕೋಟೆಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದಿನಿಂದ ರಾಜ್ಯಾದ್ಯಂತ ಬರ ಅಧ್ಯಯನಕ್ಕೆ ಪ್ರವಾಸ ಹೊರಟಿದ್ದಾರೆ. ಆದರೆ, ಅವರು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ  ಸಿದ್ದರಾಮಯ್ಯ ಅವರ ಕ್ಷೇತ್ರವಾದ ಬಾಗಲಕೋಟೆಯಿಂದಲೇ ತಮ್ಮ ಪ್ರವಾಸ ಆರಂಭಿಸಲಿರುವುದು ವಿಶೇಷ.

ಈ ವರ್ಷ ರಾಜ್ಯದಲ್ಲಿ ಇಂದೆಂದೂ ಕಾಣದಂತಹ ಬರದ ಪರಿಸ್ಥಿತಿ ಎದುರಾಗಿದೆ. ರಾಜ್ಯ ಸರ್ಕಾರಕ್ಕೆ ಬರವನ್ನು ಎದುರಿಸುವುದೇ ದೊಡ್ಡ ಸವಾಲಾಗಿದೆ. ಈ ನಡುವೆ ವಿರೋಧ ಪಕ್ಷದ ನಾಯಕನಾಗಿ ಬಿ.ಎಸ್​. ಯಡಿಯೂರಪ್ಪನವರೂ ಇಂದಿನಿಂದ ಬರ ಪ್ರವಾಸ ಆರಂಭಿಸಿದ್ದಾರೆ. ಅಲ್ಲದೆ ಮೊದಲು ಬಾದಾಮಿ ತಾಲೂಕಿನ ಮುಷ್ಠಿಗೇರಿ,ಹುನಗುಂದ ತಾಲೂಕಿನ ಗುಡೂರ ಹಾಗೂ ರಕ್ಕಸಗಿ ಗ್ರಾಮಗಳಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಲಿದ್ದಾರೆ.

ಬೆಳಗ್ಗೆ 11 ಗಂಟೆಗೆ ಮುಷ್ಠಿಗೆರೆಯಿಮದ ಬಿಎಸ್​ವೈ ತನ್ನ ಬರ ಅಧ್ಯಯನ ಪ್ರವಾಸವನ್ನು ಆರಂಭಿಸಲಿದ್ದಾರೆ. ಬಳಿಕ ಮಧ್ಯಾಹ್ನ ಬಾದಾಮಿಯಲ್ಲಿ ಬರದ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್​. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯನವರ ನಡುವಿನ ರಾಜಕೀಯ ಕಾಳಗ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವೇ. ಈ ನಡುವೆ ಹೆಜ್ಜೆ ಹೆಜ್ಜೆಗೂ ಮೈತ್ರಿ ಸರ್ಕಾರದ ವಿರುದ್ಧ ಟೀಕಾಪ್ರಹಾರವನ್ನೇ ನಡೆಸುತ್ತಿರುವ ಬಿಎಸ್​ವೈ, ಬರ ಅಧ್ಯಯನ ಪ್ರವಾಸವನ್ನು ಸಿದ್ದರಾಮಯ್ಯ ಅವರ ಕ್ಷೇತ್ರದಿಂದಲೇ ಆರಂಭಿಸಿರುವುದು ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಈ ಪ್ರವಾಸದ ವೇಳೆ ಮಾಜಿ ಸಿಎಂ ಬಿಎಸ್​ವೈಗೆ ಮಾಜಿ ಶಾಸಕ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ ಹಾಗೂ ಜಿಲ್ಲಾ ಬಿಜೆಪಿ ಮುಖಂಡರು ಸಾಥ್ ನೀಡಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ