ಎಲೆಕ್ಷನ್‍ಗೆ ಹೋಗೋಣ, ಇಲ್ಲ ವಿರೋಧ ಪಕ್ಷವಾಗಿ ಕೂರೋಣ: ಮಂಡ್ಯದ ಕೈ ನಾಯಕ

ಮಂಡ್ಯ: ರಾಜ್ಯದಲ್ಲಿ ಜೆಡಿಎಸ್ ದೋಸ್ತಿಯಿಂದ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿರುದ್ಧ ಮಂಡ್ಯದ ಕೈ ನಾಯಕ ಚೆಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಗಮಂಗಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 23 ರಂದು ಲೋಕಸಭಾ ಚುನಾವಣೆಯ ಫಲಿತಾಂಶವನ್ನು ನೋಡಿಯೂ ಸರ್ಕಾರ ಇನ್ನೂ ಬುದ್ಧಿ ಕಲಿಯುತ್ತಿಲ್ಲ. ಇದರಿಂದ ಜೊತೆಲಿದ್ದಂತಹ ಕಾಂಗ್ರೆಸ್ ಪಕ್ಷ ನೋವು ಅನುಭವಿಸಬೇಕಾಗುತ್ತದೆ. ಜೆಡಿಎಸ್ ನವರರಿಗೂ ಜನ ಬುದ್ಧಿ ಕಲಿಸುತ್ತಾರೆ ಎಂದಿದ್ದಾರೆ.

ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ “ಎಲೆಕ್ಷನ್‍ಗೆ ಹೋಗೋಣ ಇಲ್ಲ ವಿರೋಧ ಪಕ್ಷವಾಗಿ ಕೂರೋಣ” ಎಂದು ಬರೆದು ಈ ಮೂಲಕ ತಮ್ಮ ನಿರ್ಧಾರವನ್ನು ಚೆಲುವರಾಯಸ್ವಾಮಿ ತಿಳಿಸಿದ್ದಾರೆ.

ಮೈತ್ರಿ ವಿಚಾರದಲ್ಲಿ ರಾಷ್ಟ್ರದ ನಾಯಕರು ತೆಗೆದುಕೊಂಡಿರುವ ತೀರ್ಮಾನಕ್ಕೆ ನಾನು ಬದ್ಧ. ಆದರೆ ಇದೇ ತರ ಮುಂದುವರಿದರೆ ಕಾಂಗ್ರೆಸ್ ಪಕ್ಷ ಬಹಳ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ನಮ್ಮ ನಾಯಕರು ಇದನ್ನ ಸರಿಪಡಿಸಬೇಕು ಇಲ್ಲ, ಒಂದು ಪೂರ್ಣ ಪ್ರಮಾಣದ ತೀರ್ಮಾನ ತೆಗೆದುಕೊಳ್ಳಬೇಕು. ಆಗ್ಲಿಲ್ಲ ಅಂದರೆ ಮುಂದೆ ಪಕ್ಷವನ್ನು ಈ ಸ್ಥಿತಿಗೆ ಬರದೆ ಇರುವಂತೆ ನೋಡಿಕೊಳ್ಳವುದಕ್ಕೆ ಪಕ್ಷದ ಎಲ್ಲ ಮುಖಂಡರು ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ನಾನು ಇವತ್ತು ಪಕ್ಷದ ತೀರ್ಮಾನವನ್ನು ಪ್ರಶ್ನೆ ಮಾಡುವುದಕ್ಕೆ ಹೋಗಲ್ಲ. ಆದರೆ ಈಗಿನ ನಡವಳಿಕೆ ನೋಡುತ್ತಿದ್ದರೆ ಪಕ್ಷಕ್ಕೆ ಒಳ್ಳೆಯ ಭವಿಷ್ಯ ಕಾಣುತ್ತಿಲ್ಲ.

ಮೈತ್ರಿ ಚುನಾವಣೆಯಿಂದ ಈ ಮಟ್ಟಿಗೆ ಪರಿಸ್ಥಿತಿ ಎದುರಾಗಿದೆ ಎಂದು ಈಗ ಕೆಲವರಿಗೆ ಮನವರಿಕೆಯಾಗಿದೆ. ನಾನು ಕಾದು ನೋಡುತ್ತೀನಿ. ಹೆಚ್ಚು ದಿನ ಉಳಿಯಲ್ಲ.

ಈಗಾಗಲೇ ಜನ ಲೋಕಸಭಾ ಚುನಾವಣೆಯಲ್ಲಿ ಒಂದು ಸಾರಿ ತೋರಿಸಿದ್ದಾರೆ. ಇನ್ನು ಮತ್ತೆ ಅದನ್ನೇ ಮಾಡಿದರೆ ಜನ ತೀರ್ಮಾನ ತೆಗೆದುಕೊಳ್ಳುತ್ತಾರೆ ಬಿಡಿ, ನನ್ನೊಬ್ಬನ ಕೈಲಿ ಆಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ