ನೀರ್ಭಯ ಯೋಜನೆಯಡಿ ಮಹಿಳೆಯರ ಸುರಕ್ಷತೆ ಹಿನ್ನಲೆ-ಪಿಂಕ್ ಸಾರಥಿ ವಾಹನಗಳನ್ನು ಲೋಕಾರ್ಪಣೆ ಮಾಡಿದ ಸಿಎಂ

ಬೆಂಗಳೂರು,ಜೂ.6- ನಿರ್ಭಯ ಯೋಜನೆಯಡಿ ಮಹಿಳಾ ಸುರಕ್ಷತೆಗಾಗಿ ಪಿಂಕ್ ಸಾರಥಿ ವಾಹನಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಲೋಕಾರ್ಪಣೆ ಮಾಡಿದರು.

ವಿಧಾನಸೌಧದ ಮುಂಭಾಗದಲ್ಲಿ ಈ ವಾಹನಗಳಿಗೆ ಚಾಲನೆ ನೀಡಿದ ಅವರು, ಬಿಎಂಟಿಸಿ ವತಿಯಿಂದ ಖರೀದಿಸಲಾದ 25 ವಾಹನಗಳು ಬೆಂಗಳೂರಿನಾದ್ಯಂತ ಸಂಚರಿಸಲಿದ್ದು, ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಗೆ ತಂದಿರುವ ನಿರ್ಭಯ ಯೋಜನೆಯಡಿ ಬಿಎಂಟಿಸಿ 56.07 ಕೋಟಿ ಅನುದಾನ ಬಂದಿದೆ. ಅದರಲ್ಲಿ 4.30 ಕೋಟಿ ವೆಚ್ಚದಲ್ಲಿ 25 ಪಿಂಕ್ ಸಾರಥಿ ವಾಹನಗಳನ್ನು ಖರೀದಿಸಲಾಗಿದೆ ಎಂದು ತಿಳಿಸಿದರು.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್.ವಿ.ಪ್ರಸಾದ್ ಮಾತನಾಡಿ, ಮಹಿಳೆಯರ ಸುರಕ್ಷತೆಗಾಗಿ ಪಿಂಕ್ ಗಸ್ತು ವಾಹನಗಳು ಕಾರ್ಯಚರಣೆಗಿಳಿದಿವೆ. ಮಹಿಳೆಯರು ಕಾಲ್‍ಸೆಂಟರ್‍ನ ಸಹಾಯವಾಣಿಗೆ ಕರೆ ಮಾಡಿದರೆ ಪಿಂಕ್ ವಾಹನಗಳು ಅವರ ನೆರವಿಗೆ ಧಾವಿಸಲಿವೆ ಎಂದು ಹೇಳಿದರು.

ವಾಹನಗಳು ಜಿಪಿಎಸ್, ಪಬ್ಲಿಕ್ ಅಡ್ರೆಸಿಂಗ್ ಸಿಸ್ಟಮ್ ಹೊಂದಿದ್ದು ನಿಯಂತ್ರಣ ಕೊಠಡಿಯಿಂದ ವಾಹನಗಳ ಸಾರಥಿ ವಾಹನಗಳಮೇಲೆ ನಿಗಾ ವಹಿಸಲಾಗುತ್ತದೆ.ನಿರ್ಭಯ ಯೋಜನೆಯಡಿ ಮಹಿಳೆಯರಿಗೆ ಲಘು ಮತ್ತು ಭಾರೀ ವಾಹನ ಚಾಲನಾ ತರಬೇತಿ, ಒಂದು ಸಾವಿರ ಬಸ್‍ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, 15 ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ, ಸಿಸಿಟಿವಿ ಅಳವಡಿಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ