ಧೋನಿಯ ಗ್ಲೌಸ್ನಲ್ಲಿರುವ ಸೇನೆಯ ಚಿಹ್ನೆಯನ್ನ ತೆಗೆದು ಹಾಕಿ: ಬಿಸಿಸಿಐಗೆ ಐಸಿಸಿ ಸೂಚನೆ

ಟೀಂ ಇಂಡಿಯಾದ ಮಿಸ್ಟರ್ ಕೂಲ್ ಧೋನಿಯ ಗ್ಲೌಸ್‍ನಿಂದ ಸೇನೆಯ ಚಿಹ್ನೆಯನ್ನ ತೆಗೆದು ಹಾಕುವಂತೆ ಐಸಿಸಿ ಬಿಸಿಸಿಯ ಸೂಚಿಸಿದೆ.

ಮೊನ್ನೆ ಸೌಥಾಂಪ್ಟನ್‍ನಲ್ಲಿ ದ.ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಎಂಎಸ್. ಧೋನಿಯ ಗ್ಲೌಸ್‍ನಲ್ಲಿ ಭಾರತೀಯ ಸೇನೆಯ ಚಿಹ್ನೆ ಇತ್ತು. ಈ ಚಿಹ್ನೆ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿತ್ತು. ಧೋನಿ ಈ ರೀತಿಯ ಗ್ಲೌಸ್ ಹಾಕಿರುವುದಕ್ಕೆ ಐಸಿಸಿ ಅಸಮಾಧನಗೊಂಡಿದ್ದು ತಕ್ಷಣ ಚಿಹ್ನೆಯನ್ನ ತೆಗೆಸುವಂತೆ ಬಿಸಿಸಿಐಗೆ ಹೇಳಿದೆ.

ಐಸಿಸಿ ನಿಯಮದ ಪ್ರಕಾರ, ಅಂತಾರಾಷ್ಟ್ರೀಯ ಪಂದ್ಯವನ್ನಾಡುವಾಗ ಸಾಮಾಗ್ರಿ ಮತ್ತು ವಸ್ತ್ರ ಸಂಹಿತೆ ಅನುಸಾರ ರಾಜಕೀಯ, ಧಾರ್ಮಿಕ ಅಥವಾ ಜನಾಂಗೀಯ ಚಟುವಟಿಕೆಗಳ ಕುರಿತ ಸಂದೇಶವನ್ನ ಸಾರುವಂತಿಲ್ಲ.

2011ರಲ್ಲಿ ಮಾಜಿ ನಾಯಕ ಧೋನಿಗೆ ಲೆಫ್ಟಿನೆಂಟ್ ಗೌರವನ್ನ ನೀಡಲಾಗಿತ್ತು. ಜೊತೆಗೆ ಪ್ಯಾರಾ ರೆಜ್‍ಮೆಂಟ್‍ನಲ್ಲಿ ತರಬೇತಿಯನ್ನ ಕೂಡ ಪಡೆದಿದ್ದರು. ಫೆ.14 ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ತವರು ರಾಂಚಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಎಂ.ಎಸ್.ಧೋನಿ ತಂಡದ ಎಲ್ಲ ಆಟಗಾರರಿಗೆ ಸೇನೆಯ ಕ್ಯಾಪ್ ನೀಡಿದ್ದರು. ಆ ಪಂದ್ಯದಲ್ಲಿ ತಂಡದ ಎಲ್ಲ ಆಟಗಾರರು ಸೇನೆಯ ಕ್ಯಾಪ್ ಧರಿಸಿ ಆಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ