ಮೋದಲ ಬಾರಿ ಮಂತ್ರಿಯಾಗಿರುವ ಅಮಿತ್ ಶಾಗೆ ಎಲ್ಲಾ 8 ಕ್ಯಾಬಿನೆಟ್ ಕಮಿಟಿಯಲ್ಲಿ ಸ್ಥಾನ

ನವದೆಹಲಿ: ಕೇಂದ್ರ ಎನ್‌ಡಿಎ ಸರಕಾರ ಎಂಟು ಸಂಪುಟ ಸಮಿತಿಗಳನ್ನು ಪುನಾರಚಿಸಿದ್ದು, ಇದರಲ್ಲಿ ಗೃಹ ಸಚಿವ ಅಮಿತ್ ಶಾ ಎಲ್ಲ ಎಂಟರಲ್ಲೂ ಸ್ಥಾನಗಳಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿ 6ರಲ್ಲಿ ಇದ್ದಾರೆ.

ಪ್ರಧಾನಿ ಮೋದಿ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಹಾಗೂ ವಸತಿ ವ್ಯವಸ್ಥೆಯ ಸಂಪುಟ ಸಮಿತಿ ಹೊರತುಪಡಿಸಿ ಉಳಿದ 6ರಲ್ಲೂ ಸ್ಥಾನಹೊಂದಿದ್ದಾರೆ.

ಮೊದಲ ಬಾರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆದಿರುವ ಅಮಿತ್ ಶಾ ಅವರಿಗೆ 8 ಕ್ಯಾಬಿನೆಟ್ ಸಮಿತಿ ಸ್ಥಾನಗಳನ್ನು ನೀಡಲಾಗಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಎರಡು ಸಮಿತಿಯಲ್ಲಿ ಮಾತ್ರ ಸ್ಥಾನ ನೀಡುವ ಮೂಲಕ ದೂರವಿರಿಸಲಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ವಸತಿ, ವಿತ್ತೀಯ ವ್ಯವಹಾರಗಳು, ಸಂಸದೀಯ ವ್ಯವಹಾರಗಳು, ರಾಜಕೀಯ ವ್ಯವಹಾರಗಳು, ಭದ್ರತೆ, ಹೂಡಿಕೆ ಮತ್ತು ಪ್ರಗತಿ ಹಾಗೂ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಸಮಿತಿ ಸೇರಿ ಆರು ಸಮಿತಿಗಳಿಗೆ ಸದಸ್ಯರನ್ನಾಗಿ ಮಾಡಲಾಗಿದೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎರಡು ಸಮಿತಿಗಳಲ್ಲಿ ಮಾತ್ರ ಇದ್ದು, ಅವೆಂದರೆ, ಭದ್ರತೆಯ ಸಮಿತಿ ಮತ್ತು ವಿತ್ತೀಯ ವ್ಯವಹಾರಗಳ ಸಂಪುಟ ಸಮಿತಿ. ಅತ್ಯಂತ ಪ್ರಮುಖ ಸಂಪುಟ ಸಮಿತಿ ಎಂದು ಹೇಳಲಾಗುವ ಭದ್ರತೆಯ ಸಮಿತಿಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಸೀತಾರಾಮನ್ ಮತ್ತು ಜೈಶಂಕರ್ ಅವರೂ ಇರುತ್ತಾರೆ.

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರು ವಸತಿ, ಆರ್ಥಿಕ ವ್ಯವಹಾರಗಳು, ರಾಜಕೀಯ ವ್ಯವಹಾರಗಳು ಹಾಗೂ ಹೂಡಿಕೆ ಮತ್ತು ಅಭಿವೃದ್ಧಿ ಕುರಿತ ಸಂಪುಟ ಸಮಿತಿಗಳಲ್ಲಿರುತ್ತಾರೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಹಾಗೂ ಉಕ್ಕು ಖಾತೆಯ ರಾಜ್ಯ ಸಚಿವ (ಸ್ವತಂತ್ರ) ಧರ್ಮೇಂದ್ರ ಪ್ರಧಾನ್ ಅವರು ವಿತ್ತೀಯ ವ್ಯವಹಾರಗಳು ಹಾಗೂ ಉದ್ಯೋಗ-ಕೌಶಲ್ಯಾಭಿವೃದ್ಧಿಯ ಸಂಪುಟ ಸಮಿತಿಗಳಲ್ಲಿದ್ದಾರೆ.

ರೈಲ್ವೇ ಮತ್ತು ವಾಣಿಜ್ಯ-ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಅವರು ಐದು ಸಂಪುಟ ಸಮಿತಿಗಳಲ್ಲಿರುತ್ತಾರೆ, ಅವೆಂದರೆ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ, ಹೂಡಿಕೆ ಮತ್ತು ಪ್ರಗತಿ, ರಾಜಕೀಯ ವ್ಯವಹಾರಗಳು, ವಿತ್ತೀಯ ವ್ಯವಹಾರಗಳು ಹಾಗೂ ವಸತಿ ವ್ಯವಸ್ಥೆಯ ಸಂಪುಟ ಸಮಿತಿ.

ವಿಶೇಷವೆಂದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜವಳಿ ಸಚಿವೆ ಸ್ಮೃತಿ ಇರಾನಿ ಅವರು ಉದ್ಯೋಗ ಹಾಗೂ ಕೌಶಲ್ಯಾಭಿವೃದ್ಧಿ ಸಮಿತಿಯಲ್ಲಿ ವಿಶೇಷ ಆಹ್ವಾನಿತರಾಗಿದ್ದಾರೆ. ಆದರೆ, ಯಾವುದೇ 8 ಸಮಿತಿಗಳಲ್ಲೂ ಸದಸ್ಯತ್ವ ಪಡೆದಿಲ್ಲ.

8 central cabinet committees reconstructed amit shah in all modi and nirmala in 6 committees

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ