![vbk-Kumaraswamy1jpg](http://kannada.vartamitra.com/wp-content/uploads/2019/06/vbk-Kumaraswamy1jpg-447x381.jpg)
ಬೆಂಗಳೂರು, ಜೂ.5-ಗ್ರಾಮ ವಾಸ್ತವ್ಯದ ಮುಖ್ಯ ಗುರಿ ಆಡಳಿತ ಯಂತ್ರದ ಕಾರ್ಯವೈಖರಿಯನ್ನು ಅರಿಯುವುದಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸರ್ಕಾರ ರೂಪಿಸಿರುವ ಯೋಜನೆಗಳು ಫಲಕಾರಿಯಾಗಿದೆಯೇ? ಯೋಜನೆ ಬಗ್ಗೆ ಜನರ ಅಭಿಪ್ರಾಯವೇನು ಎಂಬುದನ್ನು ಅರಿಯುವುದು , ಸುತ್ತಮುತ್ತಲ ಗ್ರಾಮಗಳ ಜನರ ಅಹವಾಲುಗಳನ್ನು ಸ್ವೀಕರಿಸಿ ಕಾನೂನು ವ್ಯಾಪ್ತಿಯಲ್ಲಿ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡುವುದು ಗ್ರಾಮವಾಸ್ತವ್ಯದ ಮುಖ್ಯ ಉದ್ದೇಶವಾಗಿದೆ ಎಂದರು.
ಮಾಧ್ಯಮಗಳಲ್ಲಿ ಗ್ರಾಮ ವಾಸ್ತವ್ಯ ಕುರಿತು ಬರುತ್ತಿರುವ ವರದಿಗಳಲ್ಲಿರುವ ಸಕಾರಾತ್ಮಕ ಸಲಹೆಗಳನ್ನು ಮುಕ್ತ ಹಾಗೂ ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸಿ ಕಾನೂನು ಚೌಕಟ್ಟಿನಲ್ಲಿ ಸಾಧ್ಯವಾಗುವುದನ್ನು ಅನುಸರಿಸಲು ಪ್ರಯತ್ನಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.
ಜನರಿಗೆ ಅಗತ್ಯವಿರುವ ಯೋಜನೆಗಳನ್ನು ಜಾರಿಗೊಳಿಸಿದಾಗ ಸಹಜವಾಗಿ ಯಶಸ್ವಿಯಾಗುತ್ತವೆ. ಆದರೆ ಯೋಜನೆಗಳನ್ನು ಜನರ ಮೇಲೆ ಹೇರಿದರೆ ಯಶಸ್ವಿಯಾಗದು. ಈ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ತಮ್ಮ ಅನಿಸಿಕೆ ಎಂದಿದ್ದಾರೆ.
ಗ್ರಾಮವಾಸ್ತವ್ಯ ಎಂಬುದು ಜನಪ್ರಿಯತೆ ಗಿಟ್ಟಿಸುವ ಗಿಮಿಕ್ ಅಲ್ಲ, ಈ ಪರಿಕಲ್ಪನೆಯ ಮೂಲಪುರುಷನೂ ನಾನಲ್ಲ. ನನ್ನ ಗ್ರಾಮವಾಸ್ತವ್ಯ ಆರಂಭವಾಗಿದ್ದು, ಆಕಸ್ಮಿಕವಾಗಿ. ಪ್ರವಾಹ ಪೀಡಿತ ಕೃಷ್ಣಾ ನದಿ ದಂಡೆಯ ಪಿ.ಕೆ.ನಾಗನೂರಿನಿಂದ ಪ್ರಾರಂಭವಾಗಿತ್ತು. ಗ್ರಾಮ ವಾಸ್ತವ್ಯ ಎಂಬ ಪದವನ್ನು ಚಾಲ್ತಿಗೆ ತಂದಿದ್ದು ಮಾಧ್ಯಮದವರೇ ಎಂದು ಹೇಳಿದ್ದಾರೆ.