ದಲಿತರಿಗೆ ಅನ್ಯಾಯ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ-ರಾಜಕೀಯ ವಲಯದಲ್ಲಿ ಮೂಡಿಸಿದ ಭಾರೀ ಸಂಚಲನ

ಬೆಂಗಳೂರು, ಜೂ.5- ದಲಿತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಚ್ಚಿದ ಕಿಡಿ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಸಾಮಾಜಿಕ ಜಾಲತಾಣ ಟ್ವಿಟರ್‍ನಲ್ಲಿ ಸಿದ್ದರಾಮಯ್ಯನವರು ಕೇಂದ್ರದ ಮೋದಿ ಸರ್ಕಾರ ರಾಜ್ಯದಿಂದ ಗೆದ್ದಿರುವ ದಲಿತರ್ಯಾರಿಗೂ ಸಚಿವ ಸ್ಥಾನ ನೀಡಿಲ್ಲ. ದೊಡ್ಡ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.

ಇದಕ್ಕೆ ತಿರುಗೇಟು ನೀಡಿದ ಬಿಜೆಪಿ ನೀವು ಬೇಕಾದರೆ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ನೋಡೋಣ. ದಲಿತರ ಬಗ್ಗೆ ಕೇವಲ ಮಾತುಗಳಲ್ಲಿ ಹೇಳೋದು ಬೇಡ. ಅವರ ಬಗ್ಗೆ ಕಾಳಜಿ ಇದ್ದರೆ ಮಾಡಿ ತೋರಿಸಿ ಎಂದು ಸವಾಲು ಹಾಕಿತು.

ಇದಕ್ಕೆ ಮತ್ತೆ ಗುದ್ದು ನೀಡಿರುವ ಸಿದ್ದು ಯಾರು ಬೇಕಾದರೂ ಸಿಎಂ ಆಗಬಹುದು. ಖರ್ಗೆ ಅವರು ಸಿಎಂ ಆಗಬಾರದು ಅಂತ ಯಾರು ತಡೆದಿದ್ದಾರೆ. ನನ್ನನ್ನು ಕಾಂಗ್ರೆಸ್ ಹೈಕಮಾಂಡ್ ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿತ್ತು. ಈಗಲೂ ಯಾರು ಬೇಕಾದರೂ ಸಿಎಂ ಆಗಲಿ, ನನಗೇನು ಎಂದು ಪ್ರತಿಸವಾಲು ಹಾಕಿದ್ದಾರೆ.

ಖರ್ಗೆ ಅಥವಾ ಪರಮೇಶ್ವರ್ ಅವರು ಸಿಎಂ ಆಗಲಿ ನಮ್ಮದೇನು ಅಭ್ಯಂತರವಿಲ್ಲ ಎಂದು ನೇರವಾಗಿ ಹೈಕಮಾಂಡ್‍ನತ್ತ ಬೊಟ್ಟು ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ