ಬೆಂಗಳೂರು, ಜೂ.5- ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸರ್ಕಾರದಿಂದ ಒಂದು ರೀತಿ ಅರಾಜಕತೆ ಸೃಷ್ಟಿಯಾಗಿದ್ದು, ದೋಸ್ತಿಗಳಿಗೆ ಅಂತ್ಯಕಾಲ ಸಮೀಪಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.
ಈಗಾಗಲೇ ಸರ್ಕಾರದ ನಡವಳಿಕೆಗಳಿಂದ ಬೇಸತ್ತು ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಹಿರಿಯ ಮುಖಂಡರಾದ ರಾಮಲಿಂಗರೆಡ್ಡಿ, ರೋಷನ್ ಬೇಗ್ ಸೇರಿದಂತೆ ಅನೇಕರು ಸ್ವಪಕ್ಷದ ವಿರುದ್ಧವೇ ಕಿಡಿಕಾರಿದ್ದಾರೆ. ಜನರ ಪಾಲಿಗೆ ಸರ್ಕಾರ ಇದೆಯೋ, ಇಲ್ಲವೋ ಎಂಬ ಅನುಮಾನ ಬರುತ್ತಿದೆ. ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಪುನರುಚ್ಚರಿಸಿದರು.
ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕೇಂದ್ರದ ಸಚಿವರು ಹಾಗೂ ಸಂಸದರಿಗೆ ಸನ್ಮಾನ ಹಾಗೂ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರಕ್ಕೆ ಅಂತ್ಯಕಾಲ ಬಂದಿದೆ ಎಂದರು.
ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪ, ಹೇಳಿಕೆಗಳಿಗೆ ಪ್ರತಿಕ್ರಿಯೆಗಳು ಬರುತ್ತಿವೆ. ಕರ್ನಾಟಕದಲ್ಲಿ ಒಂದು ರೀತಿ ಅರಜಾಕತೆ ಸೃಷ್ಟಿಯಾಗಿದ್ದು, ಸರ್ಕಾರ ಯಾವುದೇ ಸಂದರ್ಭದಲ್ಲೂ ಏನುಬೇಕಾದರೂ ಆಗಬಹುದು. ಜನರ ಪಾಲಿಗೆ ಸತ್ತು ಹೋಗಿರುವ ಈ ಸರ್ಕಾರವನ್ನು ಮನೆಗೆ ಕಳುಹಿಸಬೇಕು. ಪ್ರತಿ ಪಕ್ಷವಾಗಿ ಬಿಜೆಪಿ 105 ಶಾಸಕರನ್ನು ಹೊಂದಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳೋಣ ಎಂದು ಮನವಿ ಮಾಡಿದರು.
ಈ ಬಾರಿಯ ಲೋಕಸಭೆ ಚುನಾವಣೆ ದೇಶದ ರಕ್ಷಣೆ ಮತ್ತು ಸುರಕ್ಷತೆಯ ಮೇಲೆ ನಡೆದಿದೆ. ಇದು ಜನಸಾಮಾನ್ಯರ ಚುನಾವಣೆ. ಯುವಕರು, ಯುವತಿಯರು, ವಿದ್ಯಾರ್ಥಿಗಳು, ದಲಿತರು, ಹಿಂದುಳಿದವರು ಸೇರಿದಂತೆ ಪ್ರತಿಯೊಬ್ಬರೂ ನರೇಂದ್ರ ಮೋದಿ ಅವರು ಪ್ರಧಾನಿಯಾಗಲಿ ಎಂದು ಮತ ಹಾಕಿದ್ದಾರೆ. ಅವರ ನಿರೀಕ್ಷೆಗಳನ್ನು ಹುಸಿಗೊಳಿಸದಂತೆ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ ಎಂದು ಸಲಹೆ ಮಾಡಿದರು.
ಮಾಜಿ ಉಪಮುಖ್ಯಮಂತ್ರಿ, ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಮಾತನಾಡಿ, ಮೊದಲ ಬಾರಿಗೆ ಜಾತಿ, ಧರ್ಮ ಹೊರತು ಪಡಿಸಿದ ಚುನಾವಣೆ ಇದಾಗಿದ್ದು, ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ದೇಶದ ರಕ್ಷಣೆ ಹಾಗೂ ಪ್ರತಿಯೊಬ್ಬರ ನಾಗರಿಕರಿಗೂ ಸುರಕ್ಷತೆ ಸಿಗುತ್ತದೆ ಎಂಬ ಉದ್ದೇಶದಿಂದ ಜನರು ಬಿಜೆಪಿಗೆ ನಿರೀಕ್ಷೆಗೂ ಮೀರಿದ ಗೆಲುವು ಕೊಟ್ಟಿದ್ದಾರೆ. ಅದು ದುರುಪಯೋಗವಾಗದಂತೆ ಎಚ್ಚರವಹಿಸಿ ನಾವೆಲ್ಲರೂ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಮೊದಲು ಲಿಂಗಾಯಿತರು ಒಂದು ಪಕ್ಷಕ್ಕೆ, ಒಕ್ಕಲಿಗರು ಮತ್ತೊಂದು ಪಕ್ಷಕ್ಕೆ ಎಂಬ ರೀತಿ ಇತ್ತು. ಆದರೆ, ಈ ಬಾರಿ ಜಾತಿ, ಮತ ಎಲ್ಲವನ್ನೂ ಮೀರಿ ಚುನಾವಣೆ ನಡೆದಿದೆ. ಕೇಂದ್ರದಲ್ಲಿ ಬಿಜೆಪಿ ಇದೆ. ರಾಜ್ಯದಲ್ಲೂ ಬಿಜೆಪಿ ಬರಬೇಕು. ರಾಜ್ಯದಲ್ಲಿ ಯಾವಾಗ ಬೇಕಾದರೂ ಚುನಾವಣೆ ಎದುರಾಬಹುದು, ಚುನಾವಣೆ ಎದುರಿಸಲು ಕಾರ್ಯಕರ್ತರು ಸಿದ್ಧರಾಗಬೇಕೆಂದು ಮನವಿ ಮಾಡಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು ಜನರ ನಿರೀಕ್ಷೆಯಾಗಿತ್ತು. ನರೇಂದ್ರ ಮೋದಿ ಇರುವವರೆಗೂ ಅವರೇ ಪ್ರಧಾನಿಯಾಗಿರುತ್ತಾರೆ. ಹಿಂದುತ್ವ, ಜಾತಿ, ಧರ್ಮ ಯಾವುದೂ ನಡೆಯುವುದಿಲ್ಲ ಎಂಬುದನ್ನು ಮತದಾರ ಸಾಬೀತು ಮಾಡಿದ್ದಾನೆ. ಅವರಿಗೆ ಎಷ್ಟು ಕೃತಜ್ಞತೆ ಸಲಿಸಿದರೂ ಸಾಲದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಸಚಿವ ಆರ್.ಅಶೋಕ್ ಮಾತನಾಡಿ, ಇದು ದೇಶಕ್ಕಾಗಿ ನಡೆದ ಚುನಾವಣೆ. ಇಲ್ಲಿ ಜಾತಿ, ಧರ್ಮ, ಅಭ್ಯರ್ಥಿ ಪರಿಗಣನೆಗೆ ಬರಲಿಲ್ಲ. ಮೋದಿಯವರು ಪ್ರಧಾನಿಯಾಗಿ ಅಧಿಕಾರಕ್ಕೆ ತರಬೇಕಾದರೆ ಬಿಜೆಪಿಯನ್ನು ಬೆಂಬಲಿಸಲೇಬೇಕೆಂದ್ಠು ಮತದಾರರು ತೀರ್ಮಾನಿಸಿದ್ದರು. ಪರಿಣಾಮ ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಂಡ್ಯದಲ್ಲಿ ಮುಖ್ಯಮಂತ್ರಿ ಪುತ್ರ ನಿಖಿಲ್ಕುಮಾರಸ್ವಾಮಿ ಸೇರಿದಂತೆ ಘಟಾನುಘಟಿಗಳು ಸೋತು ಮನೆ ಸೇರಿದ್ದಾರೆ ಎಂದರು.
ಪಕ್ಷದ ಪ್ರಧಾನಕಾರ್ಯದರ್ಶಿ ಅರವಿಂದ ಲಿಂಬಾವಳಿ, ವಿಧಾನಸಭೆಪ್ರತಿಪಕ್ಷದ ಉಪ ನಾಯಕ ಗೋವಿಂದ ಕಾರಜೋಳ ಸೇರಿದಂತೆ ಅನೇಕರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಸುರೇಶ್ ಅಂಗಡಿ, ಮುಖಂಡರಾದ ಸಂತೋಷ್, ವಿ.ಸೋಮಣ್ಣ, ಶ್ರೀರಾಮುಲು, ನಳಿನ್ಕುಮಾರ್ ಕಟೀಲ್, ಜಿ.ಎಸ್.ಬಸವರಾಜು, ಬಿ.ಎನ್.ಬಚ್ಚೇಗೌಡ, ಶೋಭಾಕರಂದ್ಲಾಜೆ ಸೇರಿದತಂತೆ ಅನೇಕರು ಉಪಸ್ಥಿತರಿದ್ದರು.
ಇದೇ ವೇಳೆ ನೂತನ ಸಂಸದರಿಗೆ ಪಕ್ಷದ ವತಿಯಿಂದ ಸನ್ಮಾನಿಸಲಾಯಿತು. ಜತೆಗೆ ಪ್ರತಿಯೊಬ್ಬರಿಗೂ ಸಂವಿಧಾನದ ಪ್ರತಿಗಳನ್ನು ನೀಡಲಾಯಿತು.