ಬೆಂಗಳೂರು : ಡಿಜಿಟಲ್ ಯುಗದಲ್ಲಿ ಮೊಬೈಲ್ ಸಂಖ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಂತೆ, ರಸ್ತೆಗೆ ಮೂರರಂತೆ ಮೊಬೈಲ್ ಟವರ್ಗಳು ತಲೆ ಎತ್ತುತ್ತಿವೆ.
ಸಂಪರ್ಕ ಸಾಧಿಸಲು ನೆರವಾಗುವ ಈ ಮೊಬೈಲ್ ಟವರ್ಗಳು ಜೀವಕ್ಕೆ ಹಾನಿಕಾರಕವೂ ಹೌದು. ಇದೇ ಉದ್ದೇಶದಿಂದ ಮೊಬೈಲ್ ಟವರ್ ಕಡಿವಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಟವರ್ ನಿಂದ ಆಗುತ್ತಿರುವ ದುಷ್ಪರಿಣಾಮ ಅರಿತ ಸರ್ಕಾರ ಆಸ್ಪತ್ರೆ, ಶಾಲೆ ಹಾಗೂ ಕೆಲವು ನಿಗದಿಪಡಿಸಿದ ಸ್ಥಳಗಳ 50 ಮೀಟರ್ ಪರಿಧಿಯೊಳಗೆ ಇನ್ನು ಮುಂದೆ ಯಾವುದೇ ಟವರ್ ನಿರ್ಮಾಣ ಮಾಡದಂತೆ ಆದೇಶ ನೀಡಿದೆ. ಅಲ್ಲದೇ ಇದು ಅಕ್ರಮವಾಗಿದ್ದು, ಇನ್ನು ಮುಂದೆ ಯಾವುದೇ ಕಾರಣಕ್ಕೂ ಆಸ್ಪತ್ರೆ, ಶಾಲೆಯ 50 ಮೀ. ಒಳಗೆ ಹೊಸ ಟವರ್ ನಿರ್ಮಾಣ ಮಾಡದಂತೆ ಆದೇಶ ಹೊರಡಿಸಿದೆ.
ಟೆಲಿಕಮ್ಯೂನಿಕೆಷನ್ ಇನ್ಫ್ರಾಸ್ಟ್ರಕ್ಚರ್ ಟವರ್ ರೆಗ್ಯೂಲೇಷನ್ 2019 ಪ್ರಕಾರ ರಾಜ್ಯ ಸರ್ಕಾರ ಮಕ್ಕಳ ಹಾಗೂ ರೋಗಿಗಳ ಆರೋಗ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಈ ಆದೇಶದಂತೆ ಮೇ 29ರಿಂದ ಯಾವುದೇ ಹೊಸ ಟವರ್ ನಿರ್ಮಾಣ ಮಾಡಬೇಕಾದರೆ ಈ ಕ್ರಮ ಅನುಸರಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಈ ನಿಯಮ ಮೀರಿ ಟವರ್ಗಳ ನಿರ್ಮಾಣಕ್ಕೆ ಮುಂದಾದರೆ, ಇವುಗಳನ್ನು ಮುಲಾಜಿಲ್ಲದೇ ಸ್ಥಳಾಂತರ ಮಾಡಲಾಗುವುದು ಎಂದು ಕೂಡ ತಿಳಿಸಲಾಗಿದೆ. ಈ ಸ್ಥಳಾಂತರಕ್ಕೆ ಎರಡು ಮೂರು ತಿಂಗಳು ಕಾಲಾವಕಾಶ ನೀಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.
ನದಿ ದಡದ ಆಸುಪಾಸಿನಲ್ಲಿ ಟವರ್ ಇದ್ದರೆ ಅದನ್ನು 6 ಮೀಟರ್ ದೂರದಲ್ಲಿ ಸ್ಥಳಾಂತರಿಸುವಂತೆ ಕೂಡ ಸೂಚಿಸಲಾಗಿದೆ. ಅದರಂತೆ ಕೆರೆ ಪ್ರದೇಶದಿಂದ 5 ಮೀ, ವಾಟರ್ಟ್ಯಾಂಕ್ಗಳಿಂದ 10 ಹೆಕ್ಟೇರ್ ದೂರದಲ್ಲಿ ಸ್ಥಳಾಂತರಿಸುವಂತೆ ಸೂಚನೆ ನೀಡಲಾಗಿದೆ.
ಬಡಾವಣೆಗಳಲ್ಲಿ ಖಾಲಿಜಾಗದ ಸ್ಥಳದಲ್ಲಿ ನಿರ್ಮಾಣವಾಗಬೇಕು ಅದು ಬಫರ್ ಜೋನ್ ನಿಂದ ಮೂರು ಮೀ ಅಂತರದಲ್ಲಿ ಎಂದು ತಿಳಿಸಲಾಗಿದೆ. ಒಂದು ವೇಳೆ ನಿರ್ಜನ ಪ್ರದೇಶ ಸಿಗದಿದ್ದರೆ, ಮನೆಯ ಅಂತಸ್ತಿನ ಮೇಲೆ ಕಟ್ಟಡದಿಂದ ಮೂರು ಮೀಟರ್ ಅಂತರದಲ್ಲಿ ನಿರ್ಮಿಸಬೇಕು.
ಇನ್ನು ಬೆಂಗಳೂರಿನಲ್ಲಿ ಟೆಲಿಕಾಮ್ ಕಂಪನಿಗಳು ಟವರ್ ನಿರ್ಮಾಣ ಮಾಡುವ ಮುನ್ನ ಬಿಬಿಎಂಪಿಗೆ 1 ಲಕ್ಷ ಹಣ ನೀಡಬೇಕು, ಇನ್ನುಳಿದ ಜಿಲ್ಲೆಗಳಲ್ಲಿ ನಗರಸಭೆ ಹಾಗೂ ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್ಗಳಿಗೂ ನಿಗದಿಪಡಿಸಿದ ಶುಲ್ಕ ಸಂದಾಯ ಮಾಡಬೇಕು ಎಂದು ಸಚಿವರು ತಿಳಿಸಿದ್ದಾರೆ.