ಬೆಂಗಳೂರು, ಜೂ.5- ನಗರದ ನಾಗರಿಕರ ಮೇಲೆ ಆಸ್ತಿ ತೆರಿಗೆಯ ಬರೆ ಎಳೆಯಲು ಬಿಬಿಎಂಪಿ ಮುಂದಾಗಿದೆ.
ವಸತಿ ಪ್ರದೇಶಗಳಿಗೆ ಶೇ.25, ವಾಣಿಜ್ಯ ಪ್ರದೇಶಗಳಿಗೆ ಶೇ.30ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಲು ಬಿಬಿಎಂಪಿ ನಿರ್ಧರಿಸಿದೆ.
ಪಾಲಿಕೆ ಆವರಣದಲ್ಲಿಂದು ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತ ಮಂಜುನಾಥ್ ಪ್ರಸಾದ್ ಈ ವಿಷಯ ಸ್ಪಷ್ಪಪಡಿಸಿದ್ದಾರೆ.
ಕೆಎಂಸಿ ಕಾಯ್ದೆ ಪ್ರಕಾರ, ಪ್ರತಿ ಮೂರು ವರ್ಷಗಳಿಗೊಮ್ಮೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡುವುದು ಮಾಮೂಲು. ಕಳೆದ ಮೂರು ವರ್ಷಗಳ ಹಿಂದೆಯೇ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಮಾಡಲಾಗಿರಲಿಲ್ಲ. ಹಾಗಾಗಿ 2019-20ನೆ ಸಾಲಿನಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ವಸತಿ ಪ್ರದೇಶಗಳಿಗೆ ಶೇ.25, ವಸತಿಯೇತರ ಪ್ರದೇಶಗಳಿಗೆ ಶೇ.30ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಕೌನ್ಸಿಲ್ಗೆ ಸಲ್ಲಿಸಿದ್ದೆವು. ಆದರೆ, ನೀತಿ-ಸಂಹಿತೆ ಜಾರಿ ಇದ್ದ ಕಾರಣ ಕೌನ್ಸಿಲ್ ಸಭೆಯಲ್ಲಿ ಇದಕ್ಕೆ ಅನುಮೋದನೆ ಪಡೆಯಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಮುಂದಿನ ಪಾಲಿಕೆ ಸಭೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಪ್ರಸ್ತಾವನೆ ಮುಂದಿಡುತ್ತೇವೆ. ತೆರಿಗೆ ಹೆಚ್ಚಳಕ್ಕೆ ಕೌನ್ಸಿಲ್ ಅನುಮೋದನೆ ಕಡ್ಡಾಯ. ಅನುಮೋದನೆ ಸಿಕ್ಕರೆ ಅದನ್ನು ಸರ್ಕಾರಕ್ಕೆ ಸಲ್ಲಿಸಿ ಪ್ರಸಕ್ತ ಸಾಲಿನಿಂದಲೇ ಆಸ್ತಿ ತೆರಿಗೆ ಹೆಚ್ಚಳ ಮಾಡಲಾಗುವುದು ಎಂದು ಹೇಳಿದರು.
ಆಡಳಿತ ಪಕ್ಷ ಸಮರ್ಥನೆ: ಪ್ರತಿ ಮೂರು ವರ್ಷಗಳಿಗೊಮ್ಮೆ ಆಸ್ತಿ ತೆರಿಗೆ ಹೆಚ್ಚಳ ಮಾಡಲೇಬೇಕು ಎಂದು ಕೆಎಂಸಿ ಕಾಯ್ದೆಯಲ್ಲಿ ಸ್ಪಷ್ಟ ಸೂಚನೆ ಇರುವ ಹಿನ್ನೆಲೆಯಲ್ಲಿ ಮುಂದಿನ ಪಾಲಿಕೆ ಸಭೆಯ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿ ವಿರೋಧ: ನಗರದಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಬಿಬಿಎಂಪಿ ಆಡಳಿತ ಪಕ್ಷದ ನಿರ್ಧಾರಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಒಂದು ವೇಳೆ ನಮ್ಮ ಮಾತಿಗೆ ಮನ್ನಣೆ ನೀಡದೆ ತೆರಿಗೆ ಹೆಚ್ಚಳ ಮಾಡಿದರೆ ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಪಾಲಿಕೆ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಎಚ್ಚರಿಸಿದ್ದಾರೆ.
ತೆರಿಗೆ ಹೆಚ್ಚಳದ ಮೂಲಕ ನಾಗರಿಕರ ಮೇಲೆ ಬರೆ ಎಳೆಯುವ ತಪ್ಪು ನಿರ್ಧಾರ ಕೈಗೊಳ್ಳುವ ಬದಲಾಗಿ ಟೋಟಲ್ ಸ್ಪೆಷಲ್ ಸರ್ವೆ ಮೂಲಕ ಕಟ್ಟಡಗಳ ವಿಸ್ತೀರ್ಣ ಕಡಿಮೆ ಕೊಟ್ಟಿರುವವರನ್ನು ಪತ್ತೆ ಹಚ್ಚಿ ಅವರಿಂದ ಬರಬೇಕಾದ ಬಾಕಿ ವಸೂಲಿ ಮಾಡಲಿ. ತೆರಿಗೆ ವಂಚನೆ ಮಾಡಿರುವವರನ್ನು ಪತ್ತೆ ಹಚ್ಚಿ ತೆರಿಗೆ ವಸೂಲಿ ಮಾಡಲಿ ಎಂದು ಒತ್ತಾಯಿಸಿದರು.
ಕೆಲವರು ಬೋಗಸ್ ಬಿಲ್ ಮಾಡಿ ಪಾಲಿಕೆ ಖಜಾನೆಯನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇದನ್ನು ತಪ್ಪಿಸಲಿ. ಸಂಪನ್ಮೂಲ ಕ್ರೋಢೀಕರಣಕ್ಕೆ ಆದ್ಯತೆ ನೀಡಿ ವರಮಾನ ಹೆಚ್ಚಿಸಲು ಆದ್ಯತೆ ನೀಡಬೇಕು. ಇದನ್ನು ಬಿಟ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡುವುದನ್ನು ನಾವು ಒಪ್ಪುವುದಿಲ್ಲ. ಪಾಲಿಕೆ ಸಭೆಯಲ್ಲಿ ವಿರೋಧಿಸುತ್ತೇವೆ. ಆದರೂ ಆಸ್ತಿ ತೆರಿಗೆ ಹೆಚ್ಚಳ ಮಾಡಿದರೆ ನಾಗರಿಕರೊಂದಿಗೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ರೆಡ್ಡಿ ಎಚ್ಚರಿಕೆ ನೀಡಿದರು.