ದಾಳಿ ನಡೆಸಲು ಆಲ್-ಖೈದಾ ಉಗ್ರರ ಕುತಂತ್ರ

ನವದೆಹಲಿ, ಜೂ.5-ಭಾರತದ ಸೇನಾ ಪಡೆಗಳ ಮೇಲೆ ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರು ದಾಳಿಗೆ ಹುನ್ನಾರ ನಡೆಸಿರುವಾಗಲೇ ಇನ್ನೊಂದೆಡೆ ಕುಖ್ಯಾತ ಭಯೋತ್ಪಾದಕ ಸಂಘಟನೆ ಅಲ್-ಖೈದಾ ಉಗ್ರಗಾಮಿಗಳೂ ಸಹ ಸಜ್ಜಾಗುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿಯೊಂದು ಲಭಿಸಿದೆ.

ಕಾಶ್ಮೀರ ಕಣಿವೆ ಸೇರದಂತೆ ದೇಶದ ಗಡಿ ಭಾಗಗಳ ವಾಯು ನೆಲೆಗಳು ಮತ್ತು ಸೇನಾ ಶಿಬಿರಗಳ ಮೇಲೆ ಪಠಾಣ್‍ಕೋಟ್ ದಾಳಿಯ ಶೈಲಿಯಲ್ಲಿ ಆಕ್ರಮಣ ಮಾಡಲು ಅಲ್-ಖೈದಾ ಭಯೋತ್ಪಾದಕರು ಕುತಂತ್ರ ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಅಲ್ ಖೈದಾ ನಾಯಕ ಅಲಂದ್ ಅಬ್ದುಲ್ಲಾ ನೇತೃತ್ವದ ಉಗ್ರರ ತಂಡವೊಂದು ಇದಕ್ಕಾಗಿ ವಿಶೇಷ ತರಬೇತಿ ಪಡೆದಿದ್ದು, ಭಾರತದೊಳಗೆ ನುಸುಳುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭಿಸಿದೆ.

ವಿಶೇಷವಾಗಿ ಕಾಶ್ಮೀರ ಮತ್ತು ಪಂಜಾಬ್ ಗಡಿ ಪ್ರದೇಶಗಳಲ್ಲಿನ ಏರ್‍ಬೇಸ್ ಮತ್ತು ಮಿಲಿಟರಿ ಕ್ಯಾಂಪ್‍ಗಳು ಇವರ ದಾಳಿಯ ಟಾರ್ಗೆಟ್‍ಗಳಾಗಿವೆ.

ಪಠಾಣ್‍ಕೋಟ್ ಮತ್ತು ಉರಿಯಲ್ಲಿ ನಡೆದ ಉಗ್ರರ ದಾಳಿ ಮಾದರಿಯಲ್ಲೇ ವಾಯು ಸೆಲೆಗಳು ಮತ್ತು ಸೇನಾ ಶಿಬಿರಗಳ ಮೇಲೆ ಆಕ್ರಮಣ ನಡೆಸಿ ಸಾಧ್ಯವಾದಷ್ಟೂ ಹೆಚ್ಚಿನ ಸಂಖ್ಯೆ ಯೋಧರನ್ನು ಕೊಂದು, ಭಾರೀ ನಷ್ಟ ಉಂಟು ಮಾಡುವುದು ಅಲ್‍ಖೈದಾ ಉಗ್ರರ ಹುನ್ನಾರವಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

2016ರ ಜನವರಿ 2ರಂದು ಭಾರತೀಯ ವಾಯು ಪಡೆಗೆ ಸೇರಿದ ಪಠಾಣ್‍ಕೋಟ್ ವಾಯು ನೆಲೆ ಮೇಲೆ ದಾಳಿ ನಡೆಸಿದ ಉಗ್ರರು ಆರು ಯೋಧರನ್ನು ಕೊಂದರು. ಈ ಆತ್ಮಾಹುತಿ ದಾಳಿ ಮತ್ತು ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಭಯೋತ್ಪಾದಕರೂ ಸಹ ಹತರಾದರು.

ಜಮ್ಮು ಮತ್ತು ಕಾಶ್ಮೀರದ ಉರಿ ಪಟ್ಟಣದ ಸೇನಾ ಶಿಬಿರಗಳ ಮೇಲೆ ಜೈಷ್ ಉಗ್ರರು 2-16ನೇ ಸೆಪ್ಟೆಂಬರ್ 18ರಂದು ದಾಳಿ ನಡೆಸಿ 19 ಯೋದರನ್ನು ಹತ್ಯೆ ಮಾಡಿದ್ದರು.

ಈಗಾಗಲೇ ಪಾಕಿಸ್ತಾನದ ಜೈಷ್ ಎ ಮಹಮದ್(ಜೆಇಎಂ), ಲಷ್ಕರ್-ಎ-ತೈಬಾ(ಎಲ್‍ಇಟಿ), ಹಿಜ್‍ಬುಲ್ ಮುಜಾಹಿದ್ದೀನ್(ಎಚ್‍ಎಂ) ಉಗ್ರರು ಭದ್ರತಾ ಪಡೆಗಳು ಮತ್ತು ಯೋಧರನ್ನು ಗುರಿಯಾಗಿಟ್ಟುಕೊಂಡು ಭಾರೀ ವಿಧ್ವಂಸಕ ಕೃತ್ಯವೆಸಗಲು ಸಮಯಕ್ಕಾಗಿ ಕಾಯುತ್ತಿದ್ದಾರೆ. ಮತ್ತೊಂದೆಡ ಬಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‍ಐ ಬೆಂಬಲದೊಂದಿಗೆ ಖಲಿಸ್ತಾನ್ ಉಗ್ರರು ಭಾರತದ ವಿವಿಧೆಡೆ ನಿವೃತ್ತ ಸೇನಾಧಿಕಾರಿಗಳು ಮತ್ತು ವಿಶ್ರಾಂಶ ಪೊಲೀಸ್ ಮುಖ್ಯಾಧಿಕಾರಿಗಳನ್ನು ಟಾರ್ಗೆಟ್ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ