ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಉಪಚುನಾವಣೆ-ಏಕಾಂಗಿಯಾಗಿ ಸ್ಪರ್ಧಿಸಲಿರುವ ಆರ್‍ಎಲ್‍ಡಿ

ಲಕ್ನೋ, ಜೂ.5-ಉತ್ತರಪ್ರದೇಶದಲ್ಲಿ ನಡೆಯಲಿರುವ 11 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕದಳ(ಆರ್‍ಎಲ್‍ಡಿ) ಏಕಾಂಗಿಯಾಗಿ ಸ್ಪರ್ಧಿಸಲಿದೆ.

ಉತ್ತರ ಪ್ರದೇಶದ ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಸಮಾಜವಾದಿ ಪಕ್ಷ (ಎಸ್‍ಪಿ) ಹಾಗೂ ಬಹುಜನ ಸಮಾಜ ಪಕ್ಷ(ಬಿಎಸ್‍ಪಿ) ಮೈತ್ರಿ ಮುರಿದುಬಿದ್ದು, ಎರಡೂ ಪಕ್ಷಗಳು ಉಪ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ ಬೆನ್ನಲ್ಲೇ ಆರ್‍ಎಲ್‍ಡಿ ತನ್ನ ಈ ನಿರ್ಧಾರವನ್ನು ಪ್ರಕಟಿಸಿದೆ.

ಎಸ್‍ಪಿ-ಬಿಎಸ್‍ಪಿ ತೃತೀಯ ರಂಗದ ಪಾಲುದಾರ ಪಕ್ಷವಾದ ಆರ್‍ಎಲ್‍ಡಿ ಕೂಡ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಮಸೂದ್ ಅಹಮದ್ ತಿಳಿಸಿದ್ದಾರೆ. ಅದಾಗ್ಯೂ ಆರ್‍ಎಲ್‍ಡಿ ನಿರ್ಧಾರದಿಂದ ಮಹಾಮೈತ್ರಿ ಮೇಲೆ ಭವಿಷ್ಯದಲ್ಲಿ ದಕ್ಕೆಯಾಗದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಎಸ್‍ಪಿ ಮತ್ತು ಬಿಎಸ್‍ಪಿ ವಿಧಾನಸಭೆ ಉಪ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಪ್ರಕಟಿಸಿವೆ. ಈ ಹಿನ್ನೆಲೆಯಲ್ಲಿ ನಾವು ಕೂಡ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತವೆ. ಇದರಿಂದ ಮುಂದಿನ ರಾಜಕೀಯ ಬೆಳವಣಿಗೆಯನ್ನು ಈಗಲೇ ವಿಶ್ಲೇಷಣೆ ಮಾಡುವುದು ಕಷ್ಟ ಎಂದು ಅಹಮದ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ