
ಎಲ್-ಅರಿಶ್(ಈಜಿಪ್ಟ್), ಜೂ.5- ತಪಾಸಣಾ ಕೇಂದ್ರದ ಮೇಲೆ ದಾಳಿ ನಡೆಸಿದ ಮುಸ್ಲಿಂ ಉಗ್ರರು ಕನಿಷ್ಠ 10 ಪೊಲೀಸರನ್ನು ಹತ್ಯೆ ಮಾಡಿರುವ ಘಟನೆ ಈಜಿಪ್ಟ್ನ ಸಿನೈ ದ್ವೀಪಕಲ್ಪದ ಉತ್ತರ ಭಾಗದಲ್ಲಿ ನಡೆದಿದೆ. ರಂಜಾನ್ ದಿನದಂದೇ ನಡೆದ ಈ ದಾಳಿಯಿಂದ ಜನರು ಭಯಭೀತಗಾಗಿದ್ಧಾರೆ.
ಅಲ್ ಅರಿಶ್ ನಗರದಲ್ಲಿ ಮುಸ್ಲಿಮರು ಇಂದು ಬೆಳಗ್ಗೆ ಈದ್-ಉಲ್-ಫಿತರ್ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಸನಿಹದಲ್ಲೇ ಇದ್ದ ಚೆಕ್ಪಾಯಿಂಟ್ ಮೇಲೆ ಇಸ್ಲಾಂ ಉಗ್ರರು ದಾಳಿ ನಡೆಸಿದರು. ಈ ಕೃತ್ಯದಲ್ಲಿ ಇಬ್ಬರು ಅಧಿಕಾರಿಗಳೂ ಸೇರಿದಂತೆ 10 ಪೊಲೀಸರು ಹತರಾಗಿ ಅನೇಕರು ಗಾಯಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಚೆಕ್ಪೋಸ್ಟ್ ಮೇಲೆ ದಾಳಿ ನಡೆಸಿ ವಾಹನದಲ್ಲಿ ಪರಾರಿಯಾಗುತ್ತಿದ್ದ ಉಗ್ರರನ್ನು ಯುದ್ದ ವಿಮಾನಗಳು ಬೆನ್ನಟ್ಟಿ ನಡೆಸಿದ ಕಾರ್ಯಾಚರಣೆಯಲ್ಲಿ ಐವರು ಭಯೋತ್ಪಾದಕರೂ ಹತರಾದರು.
ಈಜಿಪ್ಟ್ನಲ್ಲೂ ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರಗಾಮಿಗಳ ಹಿಂಸಾಚಾರ ತೀವ್ರಗೊಂಡಿದ್ದು, ಯೋಧರು, ಪೊಲೀಸರು ಸೇರಿದಂತೆ ನಾಗರಿಕರು ಬಲಿಯಾಗುತ್ತಿದ್ದಾರೆ.