ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮೋಸ್ಟ್ ವಾಂಟೆಡ್ 10 ಉಗ್ರರ ಪಟ್ಟಿಯನ್ನು ಭದ್ರತಾಪಡೆ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯೊಂದಿಗೆ 2010ರಿಂದ ಗುರುತಿಸಿಕೊಂಡಿದ್ದ ರಿಯಾಜ್ ಅಹ್ಮದ್ ನೈಕು ಹೆಸರು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆಯನ್ನು ಮಟ್ಟಹಾಕಲು ಮುಂದಾಗಿರುವ ಭದ್ರತಾಪಡೆಗಳು, ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯನ್ನು ಸಿದ್ಧಪಡಿಸಿವೆ.
ಶ್ರೀನಗರದ ಮೊಹಮ್ಮದ್ ಅಶ್ರಾಖ್ ಖಾನ್, ಡಾ. ಸೈಫುಲ್ಲಾಬಾರಾಮುಲ್ಲಾದ ಮೆಹ್ರಾಜ್ ಉದ್ ದ್ದಿನ್, ಕುಪ್ವಾರಾದ ಏಜಾಜ್ ಅಹ್ಮದ್ ಮಲಿಕ್ ಮತ್ತು ಪುಲ್ವಾಮಾದ ಅರ್ಷೈದ್ ಉಲ್ ಹಕ್, ಲಷ್ಕರ್ ಎ ತೊಯ್ಬಾದ ವಾಸಿಂಗ್ ಅಹ್ಮದ್ ಅಲಿಯಾಸ್ ಒಸಾಮಾ, ಜೈಷ್ ಎ ಮೊಹಮ್ಮದ್ನ ಹಫೀಜ್ ಉಮರ್ ಮತ್ತು ಝಾಹೀದ್ ಶೇಖ್ ಈ ಪಟ್ಟಿಯಲ್ಲಿರುವ ಪ್ರಮುಖ ಉಗ್ರರಾಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರ ಕಮಾಂಡ್ನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್, ಈ ವರ್ಷ ಇದುವರೆಗೆ 86 ಉಗ್ರರನ್ನು ಹತ್ಯೆ ಮಾಡಲಾಗಿದೆ. 20 ಉಗ್ರರನ್ನು ಬಂಧಿಸಲಾಗಿದೆ. ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ಮುಂದುವರಿಯಲಿದೆ. ಭಯೋತ್ಪಾದನೆಯತ್ತ ಸೆಳೆಯಲ್ಪಟ್ಟಿದ್ದ ಹಲವು ಯುವಕರನ್ನು ಮತ್ತೆ ಮುಖ್ಯವಾಹಿನಿಗೆ ಕರೆ ತರುವಲ್ಲಿ ಕೂಡ ಸಾಕಷ್ಟು ಯಶಸ್ಸು ಲಭಿಸಿರುವುದಾಗಿ ತಿಳಿಸಿದ್ದಾರೆ.
Security agencies release list of 10 most wanted terrorists in Kashmir