ಬೆಂಗಳೂರು, ಜೂ.4-ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ಪೂರ್ಣ ಪ್ರಮಾಣದಲ್ಲಿ ವೆಚ್ಚ ಮಾಡಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನಸೌಧದಲ್ಲಿಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಅನುಸೂಚಿತ ಜಾತಿಗಳ ಉಪಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆ ಅಧಿನಿಯಮ 2013 ರಚಿಸಲಾಗಿರುವ ರಾಜ್ಯ ಅನುಸೂಚಿತ ಜಾತಿಗಳು, ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸುಮಾರು 29 ಸಾವಿರ ಕೋಟಿ ರೂ. ಮೀಸಲಿಡಲಾಗಿದ್ದು, ಈ ವರ್ಷವೇ ವೆಚ್ಚ ಮಾಡಬೇಕು. ಒಂದು ವೇಳೆ ಮೀಸಲಿಟ್ಟ ಹಣವನ್ನುಖರ್ಚು ಮಾಡದಿದ್ದರೆ ಕಾಯ್ದೆ ಪ್ರಕಾರ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂಬ ಎಚ್ಚರಿಕೆ ನಿಮ್ಮ ಗಮನದಲ್ಲಿರಲಿ ಎಂದು ಸೂಚಿಸಿದರು.
ಸರ್ಕಾರ ನಿಗದಿಪಡಿಸಿರುವ ಹಣವನ್ನು ವೆಚ್ಚ ಮಾಡಬೇಕು.ಕಾಲ ವಿಳಂಬ ಮಾಡದೇ ತಕ್ಷಣವೇ ಕೆಲಸ ಕೈಗೊಳ್ಳಬೇಕು. ಇಂದಿನ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಪ್ರತಿ ಇಲಾಖೆಯು ಕಾರ್ಯಕ್ರಮಗಳ ಅನುಷ್ಟಾನಕ್ಕೆ ಕಾರ್ಯೋನ್ಮುಖವಾಗಬೇಕು. ಒಂದು ವೇಳೆ ಯಾವುದಾದರೂ ಇಲಾಖೆಯಲ್ಲಿ ಗೊಂದಲ, ಸಮಸ್ಯೆಗಳಿದ್ದರೆ ತಕ್ಷಣವೇ ಅಭಿವೃದ್ಧಿ ಪರಿಷತ್ ಸಭೆಯ ಗಮನಕ್ಕೆ ತರಬೇಕು ಎಂದು ಮುಖ್ಯಮಂತ್ರಿ ನಿರ್ದೇಶನ ನೀಡಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ, ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಡಾ.ಕೆ.ಅನ್ನದಾನಿ, ಧರ್ಮಸೇನಾ, ಅನಿಲ್ ಚಿಕ್ಕಮಾದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.