ಪಕ್ಷ ನೀಡಿರುವ ನೋಟಿಸ್‍ಗೆ ಉತ್ತರ ನೀಡುವುದಿಲ್ಲ-ಮಾಜಿ ಸಚಿವ ರೋಷನ್‍ಬೇಗ್

ಬೆಂಗಳೂರು,ಜೂ.4- ಕಾಂಗ್ರೆಸ್ ಪಕ್ಷ ತಮಗೆ ನೀಡಿರುವ ನೋಟಿಸ್‍ಗೆ ಉತ್ತರ ಕೊಡುವುದಿಲ್ಲ ಎಂದು ಸಡ್ಡು ಹೊಡೆದಿರುವ ಮಾಜಿ ಸಚಿವ ರೋಷನ್‍ಬೇಗ್, ಸಿದ್ದರಾಮಯ್ಯನವರು ಈಗಲಾದರೂ ಅಧಿಕಾರ ಬಿಟ್ಟು ಕೆಳಗಿಳಿಯಲಿ ಎಂದು ಸವಾಲು ಹಾಕಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇ ಮುಖ್ಯಮಂತ್ರಿ ಎನ್ನುತ್ತಿರುವ ಸಿದ್ದರಾಮಯ್ಯ ಈಗಲಾದರೂ ಇಳಿದು ಬಾ… ಇಳಿದು ಬಾ… ಎಂದು ಸಿದ್ದರಾಮಯ್ಯನವರ ಶೈಲಿಯಲ್ಲೇ ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯನವರಿಗೆ ನಮ್ಮ ಮಾತೇ ನಡೆಯಬೇಕೆಂಬ ಅಹಂನ ಸಮಸ್ಯೆ ಇದೆ ಎಂದು ಅವರು ಕಿಡಿಕಾರಿದ್ದಾರೆ.

ತಮಗೆ ಕೆಪಿಸಿಸಿಯಿಂದ ನೋಟಿಸ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ನೀಡಿರುವ ನೋಟಿಸ್ ಅದ್ಯಾವ ನೋಟಿಸ್ ಎಂದು ಪ್ರಶ್ನಿಸಿದ್ದು, ನಾನು ಕಾಂಗ್ರೆಸ್‍ನ ನಿಷ್ಟಾವಂತ ಸಿಪಾಯಿ, ದೇವೇಗೌಡರನ್ನು ತುಮಕೂರಿನಲ್ಲಿ ಸೋಲಿಸಿದ್ದರಲ್ಲ ಅವರಿಗೆ ನೋಟಿಸ್ ಕೊಡಲಿ, ಮಂಡ್ಯದಲ್ಲಿ ನಿಖಿಲ್‍ಕುಮಾರಸ್ವಾಮಿ ವಿರುದ್ಧ ಕೆಲಸ ಮಾಡಿದ್ದಾರಲ್ಲ ಅವರಿಗೆ ನೋಟಿಸ್ ನೀಡಲಿ. ನನಗೆ ನೋಟಿಸ್ ನೋಡಿರುವುದು ವಿಷಾದನೀಯ.

ನನಗೆ ಸಚಿವ ಸ್ಥಾನ ಬೇಡ. ಕನಿಷ್ಠ ರಾಮಲಿಂಗಾರೆಡ್ಡಿ , ಎಚ್.ಕೆ.ಪಾಟೀಲ್ ಅವರಂತಹ ಹಿರಿಯರಿಗಾದರೂ ಸಚಿವ ಸ್ಥಾನ ಕೊಡಬೇಕು. ಅದು ಬಿಟ್ಟು ಇವರದೇ ಪಕ್ಷ, ಇವರದೇ ಆಡಳಿತ ಎಂದುಕೊಂಡರೆ ಜನ ಉತ್ತರ ಕೊಡುತ್ತಾರೆ ಎಂದರು.

ಲೋಕಸಭೆ ಚುನಾವಣೆ ಸೋಲಿಗೆ ಸತ್ಯ ಶೋಧನ ಸಮಿತಿ ಮಾಡಿರುವುದು ದೊಡ್ಡ ತಮಾಷೆ ವಿಷಯ. ಕಣ್ಣೆದುರೇ ಇರುವ ಸತ್ಯಕ್ಕೆ ಸಮಿತಿಯೊಂದು ಬೇಕೆ ಎಂದು ಪ್ರಶ್ನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ