ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ತುರ್ತು ಸಭೆಯೊಂದನ್ನು ನಡೆಸಿದ್ದಾರೆ. ಅಧಿಕಾರ ವಹಿಸಿಕೊಂಡ ನಂತರದಲ್ಲಿ ಅವರು ಆಯೋಜಿಸುತ್ತಿರುವ ಮೊದಲ ಉನ್ನತ ಮಟ್ಟದ ಸಭೆ ಇದಾಗಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್, ರೈಲ್ವೆ ಸಚಿವ ಪೀಯುಷ್ ಗೋಯೆಲ್, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಆರು ಪ್ರಮುಖ ಸಚಿವರಲ್ಲದೆ ಬಿಜೆಪಿ ನಾಯಕಿ ಉಮಾ ಭಾರತಿ ಕೂಡ ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಇದಕ್ಕೂ ಮುನ್ನ ಗೃಹ ಸಚಿವ ಅಮಿತ್ ಷಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಅವಲೋಕಿಸಲು ಮತ್ತೊಂದು ಸಭೆ ನಡೆಸಿದ್ದರು. ಕಣಿವೆ ರಾಜ್ಯದಲ್ಲಿನ ಭದ್ರತಾ ವ್ಯವಸ್ಥೆ ಕುರಿತು ಮಾಹಿತಿ ಪಡೆದುಕೊಂಡರು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ, ಹೆಚ್ಚುವರಿ ಕಾರ್ಯದರ್ಶಿ (ಕಾಶ್ಮೀರ) ಜ್ಞಾನೇಶ್ ಕುಮಾರ್ ಮತ್ತು ಗೃಹ ಸಚಿವಾಲಯದ ಹಲವು ಉನ್ನತಾಧಿಕಾರಿಗಳಿಂದ ರಾಜ್ಯದಲ್ಲಿ ಕೈಗೊಳ್ಳಲಾಗಿರುವ ಮೂಲಸೌಕರ್ಯ ಯೋಜನೆಗಳ ಕುರಿತು ಚರ್ಚಿಸಿದರು.