ರಮೇಶ್ ಜಾರಕಿಹೊಳಿಯವರಿಗೆ ಡಿಸಿಎಂ ಸ್ಥಾನ ನೀಡಬೇಕು-ವಾಲ್ಮೀಕಿ ಪೀಠದ ಬ್ರಹ್ಮಾನಂದ ಸ್ವಾಮೀಜಿ

ಬೆಂಗಳೂರು,ಜೂ.3- ಮೈತ್ರಿ ಸರ್ಕಾರದಲ್ಲಿ ಶಾಸಕ ರಮೇಶ್ ಜಾರಕಿಹೊಳಿಯವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ವಾಲ್ಮೀಕಿ ಪೀಠದ ಬ್ರಹ್ಮಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.

ನಗರದ ರಮೇಶ್ ಜಾರಕಿಹೊಳಿಯವರ ನಿವಾಸಕ್ಕೆ ಆಗಮಿಸಿ ಅವರೊಂದಿಗೆ ಮಾತುಕತೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ವಾಲ್ಮೀಕಿ ಸಮುದಾಯದವರಿಗೆ ನಾಲ್ಕು ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಒಬ್ಬರಿಗೆ ಮಾತ್ರ ಸ್ಥಾನ ನೀಡಲಾಗಿದೆ.

ಮೈತ್ರಿ ಸರ್ಕಾರದಲ್ಲಿ ವಾಲ್ಮೀಕಿ ಸಮುದಾಯದವರಿಗೆ ತೀವ್ರ ಅನ್ಯಾಯವಾಗಿದ್ದು, ಪ್ರಸ್ತುತ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿಯವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಮೂಲಕ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಅವರು ಹೇಳಿದರು.

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಮೇಶ್ ಜಾರಕಿಹೊಳಿ ಸಚಿವರಾಗಿದ್ದರು. ಸರ್ಕಾರದಿಂದ ಅಂತರ ಕಾಯ್ದುಕೊಂಡಿದ್ದರು. ನಂತರ ಸಂಪುಟದಿಂದ ಕೈ ಬಿಟ್ಟ ಮೇಲೆ ಬಂಡಾಯವೆದ್ದಿದ್ದರು. ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದರಲ್ಲದೇ ತಮ್ಮೊಂದಿಗೆ ಹಲವಾರು ಶಾಸಕರಿದ್ದಾರೆ. ಎಲ್ಲರೊಂದಿಗೆ ಎಲ್ಲರೊಂದಿಗೆ ರಾಜೀನಾಮೆ ಕೊಡಿಸಿ ಸರ್ಕಾರವನ್ನು ಅಸ್ಥಿರಗೊಳಿಸಲಾಗುವುದು ಎಂದು ಪರೋಕ್ಷ ಎಚ್ಚರಿಕೆ ನೀಡಿದ್ದರು.ಅಲ್ಲದೇ ಬಿಜೆಪಿ ಆಪರೇಷನ್ ಕಮಲದ ಭಾಗವಾಗಿ ಮುಂಬೈನಲ್ಲಿ ಕಾರ್ಯತಂತ್ರವನ್ನೂ ಕೂಡ ರೂಪಿಸಿ ವಿಫಲವಾಗಿದ್ದರು.

ಲೋಕಸಭೆ ಚುನಾವಣೆ ನಂತರ ರಾಜೀನಾಮೆ ನೀಡುವುದಾಗಿ ಹೇಳಿದ್ದ ಅವರು, ಅತೃಪ್ತ ಶಾಸಕರೊಂದಿಗೆ ನಡೆಸಿದ ಮಾತುಕತೆ ಮತ್ತೆ ಮತ್ತೆ ವಿಫಲವಾಗಿತ್ತು. ಈಗ ರಮೇಶ್ ಜಾರಕಿಹೊಳಿಯವರನ್ನು ಸಂಪುಟಕ್ಕೆ ಮತ್ತೆ ತೆಗೆದುಕೊಳ್ಳುವ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ ಅವರ ಸಮುದಾಯದ ಸ್ವಾಮೀಜಿಗಳು ಅವರ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಸಲ್ಲಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಉಂಟುಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ