ವಿದ್ಯುತ್ ಸರಬರಾಜು ಮರು ಸ್ಥಾಪನೆಗೆ ಒಡಿಸ್ಸಾಗೆ ತೆರಳಿದ್ದ ಬೆಸ್ಕಾಂ ಸಿಬ್ಬಂಧಿಗಳು-ನಗರಕ್ಕೆ ವಾಪಾಸ್

ಬೆಂಗಳೂರು, ಜೂ.3-ಒಡಿಸ್ಸಾ ರಾಜ್ಯದ ಕಟಕ್ ಜಿಲ್ಲೆಯಲ್ಲಿ ಫನಿ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜನ್ನು ಮರು ಸ್ಥಾಪಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯಿಂದ ನಿಯೋಜನೆಗೊಂಡಿದ್ದ 300 ಮಾನವ ಸಂಪನ್ಮೂಲ ತಂಡ (ಇಂಜಿನಿಯರ್‍ಗಳನ್ನು ಒಳಗೊಂಡಂತೆ) ಯಶಸ್ವಿಯಾಗಿ ಪೂರೈಸಿ ಹಿಂದಿರುಗಿದೆ.

ತಂಡವು 66 ವಿತರಣಾ ಪರಿವರ್ತಕಗಳ ಕೇಂದ್ರಗಳು, 29 ಕಿ.ಮಿ 11 ಕೆ.ವಿ. ಲೈನ್ ಮತ್ತು 47 ಕಿ.ಮೀ ಎಲ್.ಟಿ ಲೈನ್ ಅನ್ನು 42-43 ಡಿಗ್ರಿ ತಾಪಮಾನದ ವಾತಾವರಣದಲ್ಲಿ ನಿರ್ಮಿಸಿ, ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಯಶ್ವಸಿಯಾಗಿದೆ. ಇದರಿಂದ ವಿವಿಧ ಗ್ರಾಮಗಳಲ್ಲಿರುವ ಸುಮಾರು 14,000 ಗ್ರಾಹಕರಿಗೆ ವಿದ್ಯುತ್ ಸಂಪರ್ಕವನ್ನು ಮರು ಕಲ್ಪಿಸಲಾಗಿದೆ.

ಕೆಲವೊಂದು ಹಳ್ಳಿಗಳಿಗೆ ರಸ್ತೆಯ ಮೂಲಕ ಪ್ರವೇಶಿಸಲು ಬಹಳ ಕಷ್ಟಕರವಾಗಿದ್ದರೂ ಸಹ, ನಮ್ಮ ಬಿವಿಕಂನ ಕೆಲಸಗಾರರು ಕಂಬಗಳು ಮುಂತಾದ ಸಾಮಾಗ್ರಿಗಳನ್ನು ತಾವೇ ಖುದ್ದಾಗಿ ತೆಗೆದುಕೊಂಡು ಹೋಗಿದ್ದರು.ರಾಜ್ಯದ ಬಿವಿಕಂ ತಂಡದ ಯಶಸ್ವಿ ಕಾಮಗಾರಿಗಳನ್ನು ಒಡಿಸ್ಸಾದ ಕೇಂದ್ರ ವಿದ್ಯುತ್ ಸರಬರಾಜು ಯುಟಿಲಿಟಿರವರು ಪ್ರಶಂಶಿಸಿರುತ್ತಾರೆ.

ತಂಡವು ತಮಗೆ ವಹಿಸಿದ್ದ ಎಲ್ಲಾ ಕಾಮಗಾರಿಗಳನ್ನು ಯಶ್ವಸಿಯಾಗಿ ಪೂರ್ಣಗೊಳಿಸಿ, ಬೆಂಗಳೂರನ್ನು ತಲುಪಿದ್ದಾರೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ