ಬೆಂಗಳೂರು, ಜೂ.3- ಮಹದೇವಪುರ ವಿಭಾಗದ ಕಂದಾಯ ಅಧಿಕಾರಿ ಬಸವಚಾರಿ ಪಾಲಿಕೆಗೆ 1 ಕೋಟಿ 20 ಲಕ್ಷ ರೂ.ವಂಚನೆ ಮಾಡಿದ್ದಾರೆ ಎಂಬ ಆರೋಪ ಕುರಿತಂತೆ ಒಂದು ವಾರದೊಳಗೆ ತನಿಖಾ ವರದಿ ನೀಡುವಂತೆ ಕಂದಾಯ ವಿಭಾಗದ ಜಂಟಿ ಆಯುಕ್ತ ವೆಂಕಟಾಚಲಪತಿ ಅವರಿಗೆ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಆದೇಶ ನೀಡಿದ್ದಾರೆ.
ಪಾಲಿಕೆಗೆ ಕೋಟ್ಯಂತರ ರೂ.ವಂಚಿಸಿರುವ ಕಂದಾಯ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳುವಂತೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಆಯುಕ್ತರಿಗೆ ಸಲ್ಲಿಸಿದ ದೂರಿನನ್ವಯ ಈ ಆದೇಶ ಹೊರಡಿಸಲಾಗಿದೆ.
ಮಹದೇವಪುರ ವಿಭಾಗದ ವೈಟ್ಫೀಲ್ಡ್ ಉಪವಿಭಾಗದ ವಾರ್ಡ್ ನಂ.83ರ ವ್ಯಾಪ್ತಿಯಲ್ಲಿರುವ ಕಾಡುಗೋಡಿ ಕೈಗಾರಿಕಾ ಪ್ರದೇಶದ ಸ್ವತ್ತಿನ ಸಂಖ್ಯೆ 67 ಮತ್ತು ಕ್ರಮ.ಸಂ.57ರಲ್ಲಿರುವ ಒಟ್ಟು 11.34 ಎಕರೆ ವಿಸ್ತೀರ್ಣದ ಪ್ರದೇಶವನ್ನು ಶ್ರೇನೊ ಲಿಮಿಟೆಡ್ ಸಂಸ್ಥೆಯ ಹೆಸರಿನಿಂದ ಏಕಾಏಕಿ ಆಕ್ಮೆ ರಿನೋ ರಿಪಲ್ ಪ್ರಾಜೆಕ್ಟ್ ಪ್ರೈ.ಲಿ. ಎಂಬ ಸಂಸ್ಥೆಯ ಹೆಸರಿಗೆ ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.
ಖಾತಾ ಸಂಖ್ಯೆ 57 ಎಂಬುದಾಗಿ ಎರಡು ಸುತ್ತುಗಳನ್ನು ನಮೂದು ಮಾಡಿರುತ್ತಾರಲ್ಲದೆ ಕಾನೂನು ರೀತಿಯ ಸಂಬಂಧಪಟ್ಟ ಸ್ವತ್ತಿನ ಮಾಲೀಕರಿಂದ ಪಾವತಿಸಬೇಕಿದ್ದ 1,19,93,000 ಮೊತ್ತದ ಅಭಿವೃದ್ಧಿ ಶುಲ್ಕ ಹಾಗೂ ಮೇಲ್ಪಾಟು ವೆಚ್ಚವನ್ನು ಪಾವತಿಸಿಕೊಳ್ಳದೆ ನಿಯಮ ಬಾಹಿರವಾಗಿ ಖಾತಾ ವರ್ಗಾವಣೆ ಮಾಡಿ ಪಾಲಿಕೆಗೆ ವಂಚಿಸಿದ್ದಾರೆ.
ಆದ್ದರಿಂದ ಮಹದೇವಪುರದ ಕಂದಾಯಾಧಿಕಾರಿ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಮತ್ತು ಸದರಿ ಸಂಸ್ಥೆಗೆ ಕಾನೂನು ಬಾಹಿರ ಮಾಡಲಾಗಿರುವ ಖಾತೆಯನ್ನು ಕೂಡಲೇ ರದ್ದುಗೊಳಿಸಿ ಆ ಸಂಸ್ಥೆಯಿಂದ ನಿಗದಿತ ಅಭಿವೃದ್ಧಿ ಶುಲ್ಕವನ್ನು ಪಾವತಿಸಿಕೊಳ್ಳುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಎನ್.ಆರ್.ರಮೇಶ್ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಅಧಿಕಾರಿಯ ವಿರುದ್ಧ ತನಿಖಾ ವರದಿ ನೀಡುವಂತೆ ಜೆಸಿ (ಕಂದಾಯ) ಅವರಿಗೆ ಆಯುಕ್ತರು ಆದೇಶಿಸಿದ್ದಾರೆ.