ಬೆಂಗಳೂರು, ಜೂ.3- ಹೊಸ ಶಿಕ್ಷಣ ನೀತಿಯಡಿ ಹಿಂದಿ ಭಾಷೆಯನ್ನು ಹೇರಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಇದೇ 15ರಂದು ಬೆಂಗಳೂರಿನಲ್ಲಿ ಹಿಂದಿಯೇತರ ರಾಜ್ಯಗಳ ಬೃಹತ್ ಶಕ್ತಿ ಪ್ರದರ್ಶನ ನಡೆಯಲಿದೆ.
ಲಾಲ್ಬಾಗ್ ಇಲ್ಲವೆ ಸ್ವತಂತ್ರ್ಯ ಉದ್ಯಾನವನದಲ್ಲಿ ಜೂ.15ರಂದು ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ, ಗೋವಾ ಹಾಗೂ ಪುದುಚೇರಿ ಸೇರಿದಂತೆ ಹಿಂದಿಯೇತರ ರಾಜ್ಯಗಳ ಪ್ರಮುಖ ರಾಜಕೀಯ ಮುಖಂಡರು, ಸಾಹಿತಿಗಳು, ಬರಹಗಾರರು, ಚಿಂತಕರು ಸೇರಿದಂತೆ ಅನೇಕರು ಕೇಂದ್ರದ ವಿರುದ್ಧ ಹೋರಾಟ ನಡೆಸಲಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಂಟಿಯಾಗಿ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿದ್ದು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜಕೀಯ ಮುಖಂಡರು ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲು ತೀರ್ಮಾನಿಸಿದೆ.
ಯಾವುದೇ ಕಾರಣಕ್ಕೂ ಹಿಂದಿ ಭಾಷೆಯನ್ನು ಕಡ್ಡಾಯವಾಗಿ ಕಲಿಯುವಂತೆ ಹೇರಬಾರದು. ಭಾಷಾಕಲಿಕೆ ವಿವೇಚನೆಯನ್ನು ಆಯಾ ರಾಜ್ಯಗಳಿಗೆ ಬಿಡಬೇಕೆಂಬ ಬೇಡಿಕೆಯನ್ನು ಮುಂದಿಡಲಿದ್ದಾರೆ.
ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯೇ ಎಲ್ಲ ರಾಜ್ಯಗಳಲ್ಲಿ ಹಿಂದಿಯನ್ನು ಹೇರಿ ಸ್ಥಳೀಯ ಭಾಷೆಗಳನ್ನು ಕಡೆಗಣಿಸುವುದಾಗಿದೆ. ಹಿಂದಿ ಭಾಷೆಯನ್ನು ಹೇರುವುದರಿಂದ ಮಾತೃಭಾಷೆ ನಾಶವಾಗುತ್ತದೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡದಂತೆ ಕೇಂದ್ರದ ಮೇಲೆ ಒತ್ತಡ ಹಾಕಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಹೋರಾಟಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಎಲ್ಲ ರೀತಿಯ ಬೆಂಬಲ ನೀಡಿದ್ದಾರೆ.
ಈಗಾಗಲೇ ತಮಿಳುನಾಡಿನಲ್ಲಿ ಡಿಎಂಕೆ ಮುಖಂಡ ಸ್ಟ್ಯಾಲಿನ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಿಂದಿ ಭಾಷೆ ಹೇರುವ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಯಾರ್ಯಾರು ಭಾಗಿ: ಜೂ.15ರಂದು ನಡೆಯಲಿರುವ ಈ ಹೋರಾಟಕ್ಕೆ ಡಿಎಂಕೆಯ ಎಂ.ಕೆ.ಸ್ಟ್ಯಾಲಿನ್, ಆಂಧ್ರ ಪ್ರದೇಶದಿಂದ ಚಂದ್ರಬಾಬು ನಾಯ್ಡು, ನೂತನ ಮುಖ್ಯಮಂತ್ರಿ ಜಗನ್ಮೋಹನರೆಡ್ಡಿ, ಚಿತ್ರನಟ ಪವನ್ಕಲ್ಯಾಣ್, ತೆಲಂಗಾಣದಿಂದ ಚಂದ್ರಶೇಖರ್ರಾವ್, ಕೇರಳದಿಂದ ಪಿಣರಾಯಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.
ಬೆಂಗಳೂರಿನಿಂದಲೇ ಈ ಹೋರಾಟಕ್ಕೆ ಚಾಲನೆ ನೀಡಿ ನಂತರ ಆಯಾ ರಾಜ್ಯಗಳಲ್ಲೂ ಪ್ರತಿಭಟನೆಯನ್ನು ಇನ್ನಷ್ಟು ಹೆಚ್ಚಿಸಬೇಕೆಂಬ ತೀರ್ಮಾನವನ್ನು ಕೈಗೊಳ್ಳಲಾಗುವುದು.ಪ್ರತಿಭಟನೆಯಲ್ಲಿ ಭಾಗವಹಿಸಲು ಬಹುತೇಕರು ಒಪ್ಪಿದ್ದಾರೆ.