ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸೋಲು ಮತ್ತು ಸರ್ಕಾರದ ಅಸ್ಥಿರತೆ ಆತಂಕದ ಬೆನ್ನಲ್ಲೇ, ಮುಖ್ಯಮಂತ್ರಿ ಕುಮಾರಸ್ವಾಮಿ ‘ಗ್ರಾಮ ವಾಸ್ತವ್ಯ’ ಪರಿಕಲ್ಪನೆಯನ್ನು ಮತ್ತೆ ಜಾರಿಗೊಳಿಸಲು ಮುಂದಾಗಿದ್ದಾರೆ. ಹದಿಮೂರು ವರ್ಷಗಳ ಹಿಂದೆ ಜಾರಿಗೊಳಿಸಿದ್ದ ಈ ಯೋಜನೆಯನ್ನು ಈ ಬಾರಿ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಉದ್ದೇಶದೊಂದಿಗೆ ಬದಲಾಯಿಸಲಾಗುತ್ತಿದೆ.
ಈ ಬಗ್ಗೆ ಟ್ವಿಟರ್ನಲ್ಲಿ ಭಾನುವಾರ ಅಭಿಪ್ರಾಯ ಹಂಚಿಕೊಂಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ‘ಜನರೊಂದಿಗೆ ಬೆರೆಯಲು, ಅವರ ಸಮಸ್ಯೆಗಳನ್ನು ಅರಿಯಲು, ಸರ್ಕಾರದ ಕಾರ್ಯವೈಖರಿ ತಿಳಿಸಲು ನೆರವಾಗುವುದು ಗ್ರಾಮ ವಾಸ್ತವ್ಯ. ಶೀಘ್ರವೇ ನನ್ನ ಗ್ರಾಮ ವಾಸ್ತವ್ಯ ಪ್ರಾರಂಭವಾಗಲಿದೆ. ಸರ್ಕಾರಿ ಶಾಲೆಗಳಲ್ಲಿ, ಎಂದು ಹೇಳಿಕೊಂಡಿದ್ದಾರೆ.
ಕುಮಾರಸ್ವಾಮಿಯವರು ಈ ಬಾರಿ ಸರ್ಕಾರಿ ಶಾಲೆಗಳಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ. ಭವಿಷ್ಯದ ಉತ್ತಮ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಹೊತ್ತ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಸೇರಿದಂತೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ಹಾಗೂ ಸ್ಥಳೀಯ ರೈತರು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ಕೆ ಈ ಬಾರಿ ಒತ್ತು ನೀಡುವ ನಿರೀಕ್ಷೆ ಇದೆ.