ರಮೇಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಎಂದ ಬ್ರಹ್ಮಾನಂದ ಸ್ವಾಮಿಜಿ

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಶಾಸಕ ರಮೇಶ್ ಜಾರಕಿಹೊಳಿಗೆ ಡಿಸಿಎಂ ಹುದ್ದೆ ನೀಡಬೇಕು ಎಂದು ವಾಲ್ಮೀಕಿ ಪೀಠದ ಬ್ರಹ್ಮಾನಂದ ಸ್ವಾಮಿಜಿ ಹೊಸದೊಂದು ಬೇಡಿಕೆ ಇಟ್ಟಿದ್ದಾರೆ.

ಮೈತ್ರಿ ಸರ್ಕಾರದ ವಿರುದ್ಧ ಶಾಸಕ ರಮೇಶ್ ಜಾರಕಿಹೊಳಿ ಬಂಡಾಯ ಶಮನವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಕಾಂಗ್ರೆಸ್ ನಲ್ಲಿ ಬಂಡಾಯವೆದ್ದಿರುವ ರಮೇಶ್ ಜಾರಕಿಹೊಳಿ ಈಗ ಸ್ವಾಮೀಜಿಯೊಬ್ಬರ ಮೂಲಕ ಹೊಸ ಬೇಡಿಕೆಯನ್ನಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಭೆಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಹ್ಮಾನಂದ ಸ್ವಾಮೀಜಿ, ಮೈತ್ರಿ ಸರ್ಕಾರದಲ್ಲಿ ವಾಲ್ಮಿಕಿ ಸಮುದಾಯಕ್ಕೆ ಅನ್ಯಾಯವಾಗಿದೆ. ಬಿಜೆಪಿ ಸರ್ಕಾರದಲ್ಲಿ ವಾಲ್ಮೀಕಿ ಸಮಾಜದವರಿಗೆ 4 ಸ್ಥಾನ ನೀಡಲಾಗಿತ್ತು. ಆದರೆ ಈಗಿನ ಸರ್ಕಾರದಲ್ಲಿ ಕೇವಲ ಒಬ್ಬರಿಗೆ ಮಾತ್ರ ಮಂತ್ರಿ ಸ್ಥಾನ ನೀಡಲಾಗಿದೆ. ಇದು ಸರಿಯಲ್ಲ. ಹೀಗಾಗಿ ಇನ್ನೊರ್ವ ಮಂತ್ರಿಯಾಗಿ ರಮೇಶ್ ಅವರನ್ನು ಪರಿಗಣಿಸಬೇಕು ಎಂದರು.

ಪ್ರಮುಖವಾಗಿ ರಮೇಶ್ ಜಾರಕಿಹೊಳಿ ಅವರಿಗೆ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಬ್ರಹ್ಮಾನಂದ ಸ್ವಾಮಿಜಿ ಬೇಡಿಕೆ ಇಟ್ಟಿದ್ದಾರೆ.

ಈ ಮೂಲಕ ಸ್ವಾಮಿಜಿಗಳನ್ನು ಮುಂದೆಬಿಟ್ಟು ರಾಜಕೀಯ ಬೇಡಿಕೆ ಇಟ್ಟಿರುವ ರಮೇಶ್ ಜಾರಕಿಹೊಳಿ ಈಗ ಡಿಸಿಎಂ ಹುದ್ದೆಯನ್ನೇ ನೀಡಬೇಕು ಎಂದು ಹೇಳುವ ಮೂಲಕ ಸರ್ಕಾರದ ಮೇಲೆ ಹೊಸ ಒತ್ತಡ ಹೇರಲು ಮುಂದಾಗಿದ್ದಾರೆ. ಈಗಾಗಲೇ ಸಿಎಂ ಹೆಚ್ ಡಿ ಕುಮಾರಸ್ವಾಮಿ ರಮೇಶ್ ಜಾರಕಿಹೊಳಿಯವರಿಗೆ ಸಚಿವ ಸ್ಥಾನದ ಆಫರ್ ಇಟ್ಟಿದ್ದಾರೆ. ಆದಾಗ್ಯೂ ಯಾವುದೇ ಪ್ರತಿಕ್ರಿಯೆ ನೀಡದ ರಮೇಶ್, ಈಗ ಸ್ವಾಮಿಜಿ ಮೂಲಕ ಡಿಸಿಎಂ ಸ್ಥಾನವೇ ಬೇಕು ಎಂಬ ಬೇಡಿಕೆ ಇಡುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

Ramesh Jarkhihalli,demanded,DCM post

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ