ಬೆಂಗಳೂರು, ಜೂ.3- ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ 6 ಕೋಟಿ ತೆರಿಗೆ ಹಣ ಖಾಸಗಿ ಸಂಸ್ಥೆಯವರ ಪಾಲಾಗಿದೆ.
ಪಾಲಿಕೆಗೆ ಸೇರಿದ್ದ ಪ್ರದೇಶವನ್ನೇ ಖಾಸಗಿ ಸಂಸ್ಥೆಗೆ ಸೇರಿದ ಆಸ್ತಿ ಎಂದು ಬಿಬಿಎಂಪಿ ಅಧಿಕಾರಿಗಳು ಬರೋಬ್ಬರಿ 6 ಕೋಟಿ ಟಿಡಿಆರ್ ಹಣವನ್ನು ಖೊಡೇಸ್ ಸಂಸ್ಥೆಗೆ ದಾನ ಮಾಡಿದ್ದಾರೆ.
ಓಕಳಿಪುರಂ ವೃತ್ತದಲ್ಲಿ ನಿರ್ಮಿಸಲಾಗುತ್ತಿರುವ 8 ಪಥದ ಕಾರಿಡಾರ್ ನಿರ್ಮಾಣಕ್ಕೆ ಪಾಲಿಕೆ ಅಕ್ಕ ಪಕ್ಕದ ಆಸ್ತಿಗಳಿಗೆ ಟಿಡಿಆರ್ ನೀಡಿ ವಶಪಡಿಸಿಕೊಳ್ಳಲು ತೀರ್ಮಾನಿಸಿತ್ತು.
ಖೊಡೇಸ್ ವೃತ್ತದಿಂದ ಓಕಳಿಪುರಂ ಕಡೆಗೆ ಬರುವ ಮಾರ್ಗ ಮಧ್ಯದ ಪಕ್ಕದಲ್ಲಿರುವ ಆಸ್ತಿ ತಮ್ಮದು ಎಂದು ಖೊಡೇಸ್ ಸಂಸ್ಥೆಯ ಅಧಿಕಾರಿಗಳು ಪಾಲಿಕೆಗೆ ಸುಳ್ಳು ಮಾಹಿತಿ ನೀಡಿದ್ದರು.
ಈ ಸುಳ್ಳು ಮಾಹಿತಿಯನ್ನೇ ನಂಬಿದ ಬಿಬಿಎಂಪಿ ಅಧಿಕಾರಿಗಳು ಹಿಂದು ಮುಂದು ನೋಡದೆ ತಮ್ಮದೇ ಆಸ್ತಿಯನ್ನು ಖೊಡೇಸ್ ಸಂಸ್ಥೆಯ ಆಸ್ತಿ ಎಂದು ನಂಬಿಕೊಂಡು ಚದರ ಮೀಟರ್‍ಗೆ 1,50,700 ರೂ. ಮಾರ್ಗಸೂಚಿ ದರಕ್ಕೆ ದುಪ್ಪಟ್ಟು ದರ ಅಂದರೆ ಚದರ ಮೀಟರ್‍ಗೆ 3,01,400 ರೂ. ದರ ನಿಗದಿಪಡಿಸಿ 196.557 ಚದರ ಮೀಟರ್ ಭೂಮಿಗೆ 5,92,42,280 ರೂ.ಗಳಿಗೆ ಡಿಆರ್‍ಸಿ ನೀಡಿದೆ.
ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿಕೊಂಡರು ಎನ್ನುವಂತೆ ಬಿಬಿಎಂಪಿ ಅಧಿಕಾರಿಗಳಿಗೆ 6 ಕೋಟಿ ಟಿಡಿಆರ್ ಹಣ ನೀಡಿದ ಮೇಲೆ ಆಸ್ತಿ ಪಾಲಿಕೆಗೆ ಸೇರಿದ್ದು ಎಂಬ ಬಗ್ಗೆ ಜ್ಞಾನೋದಯವಾಗಿದೆ.
ಇತ್ತೀಚೆಗೆ ನಡೆಸಿದ ಸರ್ವೆಯಲ್ಲಿ 6ಕೋಟಿ ಟಿಡಿಆರ್ ನೀಡಿದ ಜಾಗ ಬಿಬಿಎಂಪಿಗೆ ಸೇರಿದ್ದು ಎಂದು ಸಾಬೀತಾಗುತ್ತಿದ್ದಂತೆ ನಿಮಗೆ ನೀಡಿರುವ 6 ಕೋಟಿ ಟಿಡಿಆರ್ ಹಣವನ್ನು ಹಿಂತಿರುಗಿಸುವಂತೆ ಖೊಡೇಸ್ ಸಂಸ್ಥೆಯವರ ಮನೆ ಬಾಗಿಲು ತಟ್ಟುತ್ತಿದ್ದಾರೆ.
ಆದರೆ ಯಾವುದೇ ಕಾರಣಕ್ಕೂ ಹಣ ಹಿಂದಿರುಗಿಸುವುದಿಲ್ಲ ಎಂದು ಖೊಡೇಸ್ ಸಂಸ್ಥೆಯವರು ಪಟ್ಟು ಹಿಡಿದಿರುವುದರಿಂದ ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ತೆರಿಗೆದಾರರ 6 ಕೋಟಿ ಹಣ ಹೊಳೆಯಲ್ಲಿ ಹುಣಸೆಹಣ್ಣು ಕಿವುಚಿದಂತಾಗಿದೆ.
ಕೂಡಲೇ ಸರ್ಕಾರ ಬಿಬಿಎಂಪಿ ಅಧಿಕಾರಿಗಳು ಮಾಡುತ್ತಿರುವ ಯಡವಟ್ಟುಗಳ ಮೇಲೆ ಹದ್ದಿನ ಕಣ್ಣಿಡದಿದ್ದರೆ ತೆರಿಗೆದಾರರ ಇನ್ನೆಷ್ಟು ಕೋಟಿ ಹಣ ಕಂಡವರ ಪಾಲಾಗುತ್ತದೆ ಆ ದೇವರೇ ಬಲ್ಲ…