ಬೆಸ್ಕಾಂ, ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳಿಗೆ ಮೇಯರ್‍ರವರಿಂದ ಎಚ್ಚರಿಕೆ

ಬೆಂಗಳೂರು, ಜೂ.3- ನಿಗದಿತ ಅವಧಿಯೊಳಗೆ ಕಾಟನ್‍ಪೇಟೆ ಟೆಂಡರ್ ಶೂರ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಮೇಯರ್ ಗಂಗಾಂಬಿಕೆ ಇಂದಿಲ್ಲಿ ತಾಕೀತು ಮಾಡಿದರು.

ಜನನಿಬಿಡ ಕಾಟನ್‍ಪೇಟೆ ರಸ್ತೆಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಶೂರ್ ರಸ್ತೆ ನಿರ್ಮಾಣ ಕಾಮಗಾರಿಗೆ 4 ತಿಂಗಳ ಹಿಂದೆ ಚಾಲನೆ ನೀಡಿದರೂ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ಸ್ಥಳೀಯರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯರ ಮನವಿ ಮೇರೆಗೆ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮೇಯರ್ ಅವರು ಕಾಮಗಾರಿ ವಿಳಂಬಕ್ಕೆ ಕಾರಣವೇನೆಂದು ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳು ಜನ ಹಾಗೂ ವಾಹನ ದಟ್ಟಣೆ ಹಿನ್ನೆಲೆಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಸಬೂಬು ಹೇಳಲು ಮುಂದಾದಾಗ ಗರಂ ಆದ ಮೇಯರ್ ಅವರು ಸಬೂಬು ಹೇಳುವುದು ಬಿಟ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರೋತ್ಥಾನ ಯೋಜನೆಯಡಿ 1.75 ಕಿ.ಮೀ ಉದ್ದದ ರಸ್ತೆಯನ್ನು ಟೆಂಡರ್ ಶೂರ್ ಮಾದರಿಯಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಭಾಗದಲ್ಲಿ ಕಿಕ್ಕಿರಿದ ಜನ ಸಂದಣಿ ಇರುವುದರಿಂದ ಕಾಮಗಾರಿ ವಿಳಂಬವಾಗಿದೆ. ಬಿಬಿಎಂಪಿ, ಜಲಮಂಡಳಿ ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ನಿಗದಿತ ಅವಧಿಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ ಎಂದರು.

ಈ ರಸ್ತೆಯಲ್ಲಿ ಕೆಲವು ಕಟ್ಟಡಗಳು ನಿರ್ಮಾಣವಾಗುತ್ತಿದ್ದು , ಮಾಲೀಕರು ಸುತ್ತಮುತ್ತ ತ್ಯಾಜ್ಯ ಸುರಿದಿದ್ದಾರೆ. ಕೆಲ ಮಾಲೀಕರು ಸಾಮಗ್ರಿಗಳನ್ನು ಸ್ಥಳದಲ್ಲೇ ಬಿಟ್ಟಿದ್ದಾರೆ.ತ್ಯಾಜ್ಯ ನೀರನ್ನು ರಸ್ತೆಗಳಿಗೆ ಬಿಡಲಾಗುತ್ತಿದೆ. ಇಂತಹವರಿಗೆ ಎಚ್ಚರಿಕೆ ನೀಡಿ ಎಲ್ಲವನ್ನೂ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

ಉಪ ಮೇಯರ್ ಭದ್ರೇಗೌಡ, ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ , ಮುಖ್ಯ ಅಭಿಯಂತರ ಕೆ.ಟಿ.ನಾಗರಾಜ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ