ಬೆಂಗಳೂರು, ಜೂ.3- ರಾಜ್ಯದ ಪದವಿ ಕಾಲೇಜಿನಲ್ಲಿ ಖಾಲಿ ಇರುವ 3800 ಉಪನ್ಯಾಸಕರ ನೇಮಕಕ್ಕೆ ಅನುಮೋದನೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.
ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಲಿ ಇರುವ 996 ಪ್ರಾಂಶುಪಾಲರ ಹುದ್ದೆಗಳ ಪೈಕಿ ಈ ವರ್ಷ ಶೇ.50ರಷ್ಟು ಭರ್ತಿ ಮಾಡಲಾಗುವುದು. ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಅನುದಾನ ಹಾಗೂ ಸಿಬ್ಬಂದಿ ನೇಮಕಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.
ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, 2020ರ ವೇಳೆಗೆ ಆನ್ಲೈನ್ನಲ್ಲೇ ಪರೀಕ್ಷೆ ಬರೆಯುವ ವ್ಯವಸ್ಥೆ ಜಾರಿಗೆ ತರಲಾಗುವುದು.ಉನ್ನತ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದ್ದು, ಹೊಸ ಕೋರ್ಸ್ಗಳನ್ನು ತೆರೆಯುವ ಮೂಲಕ ಕೌಶಲ್ಯಾಭಿವೃದ್ಧಿ ಪ್ಲೇಸ್ಮೆಂಟ್ ಕೋರ್ಸ್ಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಪ್ರತಿ ವಿಶ್ವವಿದ್ಯಾನಿಲಯವು ಐದು ಗ್ರಾಮಗಳನ್ನು ದತ್ತು ತೆಗೆದುಕೊಂಡು ಹಳ್ಳಿ ಕಡೆ ಗಮನ ಹರಿಸುವಂತೆ ಸೂಚಿಸಲಾಗಿದ್ದು, ಕೇವಲ ಆರು ತಿಂಗಳಲ್ಲೇ ಸಂಸ್ಕøತ ವಿಶ್ವವಿದ್ಯಾನಿಲಯದ ಕಟ್ಟಡವನ್ನು ನಿರ್ಮಾಣ ಮಾಡಿರುವುದು ಸಂತಸದ ವಿಷಯ ಎಂದರು.
ನಂತರ ರಾಜ್ಯಪಾಲ ವಜುಬಾಯಿ ವಾಲಾ ಮಾತನಾಡಿ, ಮೌಲ್ಯಾಧಾರಿತ ಹಾಗೂ ವ್ಯಕ್ತಿತ್ವ ರೂಪಿಸುವಂತಹ ಶಿಕ್ಷಣ ನೀಡಬೇಕಾದ ಅಗತ್ಯವಿದ್ದು, ಇಂಗ್ಲಿಷ್ಗೆ ಸಿಗುತ್ತಿರುವ ಮನ್ನಣೆ ಸಂಸ್ಕøತ ಭಾಷೆಗೆ ಸಿಗುತ್ತಿಲ್ಲ ಎಂದು ವಿಷಾದಿಸಿದರು.
ಮಕ್ಕಳಲ್ಲಿ ಸಂಸ್ಕøತ, ಶಿಸ್ತು ಅಗತ್ಯವಾಗಿದ್ದು, ಶಿಕ್ಷಣದ ಹಂತದಲ್ಲೇ ನೀಡಬೇಕಿದೆ.ಸಂಸ್ಕøತ ವಿವಿಯಲ್ಲಿ ಶುಲ್ಕ ವಿನಾಯಿತಿ ನೀಡಿ ಉಚಿತ ಶಿಕ್ಷಣ ನೀಡುವ ಚಿಂತನೆ ನಡೆಸಬೇಕಿದೆ.ಕರ್ನಾಟಕದಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಉತ್ತಮ ಪ್ರೋತ್ಸಹ ಸಿಗುತ್ತಿದೆ ಎಂದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕರ್ನಾಟಕ ಸಂಸ್ಕøತ ವಿವಿ ಕುಲಪತಿ ಪದ್ಮಶೇಖರ್, ಶಿವಮೊಗ್ಗದ ಶ್ರೀಕ್ಷೇತ್ರ ಹೊಂಬುಜ ಜೈನಮಠದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಸೇರಿದಂತೆ ಮತ್ತಿತರರಿದ್ದರು.