ಬೆಂಗಳೂರು, ಜೂ.2- ಎಐಸಿಸಿಯ ಸಾಮಾಜಿಕ ಜಾಲತಾಣ ಭಾಗದ ಮುಖ್ಯಸ್ಥೆಯಾಗಿದ್ದ ರಮ್ಯಾ ಟ್ವಿಟರ್ ಖಾತೆಯ ಎಲ್ಲಾ ಮಾಹಿತಿಯನ್ನು ಅಳಿಸಿ ಹಾಕುವ ಮೂಲಕ ಕುತೂಹಲ ಕೆರಳಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಿದ್ದ ರಮ್ಯಾ, ಅನಂತರ ಲೋಕಸಭೆ ಚುನಾವಣೆವರೆಗೂ ಸಾಮಾಜಿಕ ಜಾಲತಾಣವನ್ನು ಯಶಸ್ವಿಯಾಗಿ ಮುನ್ನಡೆಸಿದರು.
ಕೆಲವೊಮ್ಮೆ ಅವರ ಟ್ವಿಟ್ಗಳು ಹಾಗೂ ಇನ್ಸ್ಟಾಗ್ರಾಮ್ನ ಪೋಸ್ಟ್ಗಳು ತೀವ್ರ ಚರ್ಚೆಗೆ ಗ್ರಾಸವಾಗಿದ್ದವು. ಆದರೆ, ಇದ್ದಕ್ಕಿದ್ದಂತೆ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸಾಮಾಜಿಕ ಜಾಲತಾಣದಿಂದ ದೂರ ಉಳಿದಂತೆ ಕಾಣಿಸುತ್ತಿದೆ.
ಕಳೆದ ಎರಡು ದಿನಗಳ ಹಿಂದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಶುಭಾಶಯ ಕೋರಿ ಟ್ವಿಟ್ ಮಾಡಿದ್ದರು.
ಅಧೋಗತಿ ತಲುಪುತ್ತಿರುವ ರಾಷ್ಟ್ರದ ಜಿಡಿಪಿ ನಿಮ್ಮ ಅವಧಿಯಲ್ಲಾದರೂ ಚೇತರಿಕೆ ಕಾಣಲಿ, ನಿಮಗೆ ನಮ್ಮ ಎಲ್ಲಾ ರೀತಿಯ ಬೆಂಬಲ ಮತ್ತು ಸಹಕಾರಗಳಿರುತ್ತವೆ ಎಂದು ಮಾಡಿದ್ದ ಟ್ವಿಟ್ ಕೊನೆಯಾಗಿದೆ.
ಅನಂತರ ತಮ್ಮ ಖಾತೆಯಲ್ಲಿದ್ದ ಎಲ್ಲಾ ಟ್ವಿಟ್ಗಳನ್ನು ರಮ್ಯಾ ಅಳಿಸಿ ಹಾಕಿದ್ದಾರೆ. ಇನ್ಸ್ಟಾಗ್ರಾಮ್ ಮತ್ತು ಪೇಸ್ಬುಕ್ನಲ್ಲಿದ್ದ ಖಾತೆಗಳನ್ನು ಮರೆಮಾಚಲಾಗಿದೆ.
ಪೇಸ್ಬುಕ್ನಲ್ಲಿ ರಮ್ಯಾ ಹೆಸರಿನಲ್ಲಿ ಹಲವಾರು ಖಾತೆಗಳು ಮತ್ತು ಪೇಜ್ಗಳಿವೆ. ಖುದ್ದಾಗಿ ಅವರೇ ನಿರ್ವಹಣೆ ಮಾಡುತ್ತಿದ್ದ ಖಾತೆ ಮಾತ್ರ ನಾಪತ್ತೆಯಾಗಿದೆ.
ಸುಮಾರು 2-3 ವರ್ಷಗಳಿಂದಲೂ ಸಾರ್ವಜನಿಕ ಜೀವನದಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳದೆ ತೆರೆ-ಮರೆಯಲ್ಲೇ ಕೆಲಸ ಮಾಡುತ್ತಿದ್ದ ರಮ್ಯಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುತ್ತಿದ್ದರು. ಈಗ ಅಲ್ಲಿಂದಲೂ ನಾಮಪತ್ತೆಯಾಗುವ ಮುನ್ಸೂಚನೆ ನೀಡಿದ್ದಾರೆ.
ಸಹಜವಾಗಿ ಇದರಿಂದ ರಮ್ಯಾ ಅವರ ರಾಜಕೀಯ ನಡೆಗಳೂ ಗೊಂದಲ ಉಂಟು ಮಾಡಿವೆ. ಇದರೊಂದಿಗೆ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥರ ಹುದ್ದೆಯನ್ನು ರಮ್ಯಾ ತೊರೆಯಲಿದ್ದಾರೆಯೇ ಎಂಬ ಅನುಮಾನಗಳನ್ನು ಹುಟ್ಟುಹಾಕಿವೆ.