ಬೆಂಗಳೂರು, ಜೂ.2-ಜೆಡಿಎಸ್ ರಾಜ್ಯಾಧ್ಯಕ್ಷ ಶಾಸಕ ಎಚ್.ವಿಶ್ವನಾಥ್ ರಾಜೀನಾಮೆ ನೀಡುವುದು ಖಚಿತವಾಗಿದೆ.
ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಾವು ಸೂಚಿಸಿದ ಅಭ್ಯರ್ಥಿಗಳಿಗೆ ಪಕ್ಷದಿಂದ ಟಿಕೆಟ್ ನೀಡಲಿಲ್ಲ ಎಂದು ಅಸಮಾಧಾನಗೊಂಡಿದ್ದ ಅವರು, ಸಚಿವ ಸಾ.ರಾ.ಮಹೇಶ್ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿದ್ದರು. ಜೆಡಿಎಸ್ನಲ್ಲಿ ತಮಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಹೇಳುವ ಮೂಲಕ ತಮ್ಮೆಲ್ಲ ಆಕ್ರೋಶವನ್ನು ಅವರು ಹೊರ ಹಾಕಿದ್ದರು.
ಈ ಮೊದಲು ಅನಾರೋಗ್ಯ ಕಾರಣಕ್ಕಾಗಿ ವಿಶ್ವನಾಥ್ ಎರಡು ಬಾರಿ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಅದಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅವಕಾಶ ಕೊಟ್ಟಿರಲಿಲ್ಲ. ಹೀಗಾಗಿ ಲೋಕಸಭೆ ಚುನಾವಣೆ, ವಿಧಾನಸಭೆ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಉಪಚುನಾವಣೆ ವಿಶ್ವನಾಥ್ ಅವರ ನಾಯಕತ್ವದಲ್ಲಿ ನಡೆದಿತ್ತು.
ಲೋಕಸಭೆ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊರುವುದಾಗಿ ಹೇಳಿದ್ದ ವಿಶ್ವನಾಥ್, ಅದಕ್ಕಾಗಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆಗಲೂ ಪಕ್ಷದ ವರಿಷ್ಠರು ವಿಶ್ವನಾಥ್ ಅವರ ಮನವೊಲಿಸಿದ್ದರು.
ಇತ್ತೀಚೆಗಷ್ಟೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ನೀಡಿದ್ದ ಬಹಿರಂಗ ಹೇಳಿಕೆಗಳು ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಆ ಸಂದರ್ಭದಲ್ಲಿ ಜೆಡಿಎಸ್ನ ನಾಯಕರು ತಮ್ಮ ಬೆಂಬಲಕ್ಕೆ ನಿಲ್ಲಲಿಲ್ಲ ಎಂಬ ಅಸಮಾಧಾನವೂ ವಿಶ್ವನಾಥ್ ಅವರನ್ನು ಕಾಡುತ್ತಿತ್ತು.
ಸಮ್ಮಿಶ್ರ ಸರ್ಕಾರದ ಸುಗಮ ಆಡಳಿತಕ್ಕೆ ರಚಿಸಲಾಗಿರುವ ಸಮನ್ವಯ ಸಮಿತಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ರಾಜ್ಯಾಧ್ಯಕ್ಷರಿಗೆ ಸದಸ್ಯತ್ವ ನೀಡಬೇಕು ಎಂದು ವಿಶ್ವನಾಥ್ ಪ್ರತಿಪಾದಿಸಿದ್ದರು.ಅದಕ್ಕೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈಗಾಗಲೇ ಪಕ್ಷದ ವತಿಯಿಂದ ನೀಡಿದ್ದ ಕಾರು ಮತ್ತಿತರ ಸೌಲಭ್ಯಗಳನ್ನು ವಿಶ್ವನಾಥ್ ಅವರು ವಾಪಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.