ಬೆಂಗಳೂರು: ಸಮ್ಮಿಶ್ರ ಸರ್ಕಾರದ ಪಾಲಿಗೆ ಹುಳಿಯಾಗಿರುವ ಶಾಸಕ ರಮೇಶ್ ಜಾರಕಿಹೊಳಿ ಮತ್ತೆ ಒಂಟಿಯಾದ್ರಾ ಎಂಬ ಪ್ರಶ್ನೆ ರಾಜಕೀಯ ಪಡಸಾಲೆಯಲ್ಲಿ ಹುಟ್ಟಿಕೊಂಡಿದೆ. ನಿರಂತರವಾಗಿ ಬಿಜೆಪಿ ನಾಯಕರ ಜೊತೆ ಸಂಪರ್ಕದಲ್ಲಿದ್ದ ರಮೇಶ್ ಜಾರಕಿಹೊಳಿ ಸರ್ಕಾರ ಬೀಳಿಸಲು ತೆರೆಮರೆಯಲ್ಲಿ ಪ್ರಯತ್ನಿಸಿದ್ದುಂಟು.
ಸಚಿವ ಸ್ಥಾನ ಸಿಗದೇ ಅಸಮಾಧಾನಿತರನ್ನು ಒಂದು ಮಾಡಲು ರಮೇಶ್ ಜಾರಕಿಹೊಳಿ ಮುಂದಾಗಿದ್ದರು. ಇದೀಗ ನಿಮ್ಮ ಜೊತೆ ಬರ್ತಿವಿ ಎಂದಿದ್ದ ಶಾಸಕರು ಯೂ ಟರ್ನ್ ಹೊಡೆದಿದ್ದು, ಈ ಹಿಂದೆ ಹೇಳಿದಂತೆ ರಮೇಶ್ ಜಾರಕಿಹೊಳಿ ಅವರು ಏಕಾಂಗಿಯಾಗಿದ್ದಾರೆ ಎಂದು ಶಾಸಕರ ಆಪ್ತ ಮೂಲಗಳು ಹೇಳುತ್ತಿವೆ.
ಇತ್ತೀಚೆಗೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಗೂ ರಮೇಶ್ ಜಾರಕಿಹೊಳಿ ಗೈರಾಗಿದ್ದರು. ಇತ್ತ ಬಂಡಾಯದ ಬಾವುಟ ಹಿಡಿದು ಓಡಾಡುತ್ತಿದ್ದ ರಮೇಶ್ ಜಾರಕಿಹೊಳಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಬಿಜೆಪಿ ಸಹ ಹಿಂದೇಟು ಹಾಕುತ್ತಿದೆ ಎನ್ನಲಾಗುತ್ತಿದೆ. ಇತ್ತ ಕಾಂಗ್ರೆಸ್ ಗೆ ಮತ್ತೆ ಹಿಂದಿರುಗಿ ಹೋಗುವ ಪರಿಸ್ಥಿತಿಯೂ ಇಲ್ಲ, ಬಿಜೆಪಿಯವರು ಕರೆಯೋಕೆ ಸಿದ್ಧರಿಲ್ಲ. ಎಲ್ಲ ಅತೃಪ್ತ ನಾಯಕರನ್ನು ನಂಬಿದ್ದರಿಂದ ರಾಜಕೀಯದಲ್ಲಿ ನನಗೆ ಮುಖಭಂಗವಾಯ್ತು ಎಂದು ರಮೇಶ್ ಜಾರಕಿಹೊಳಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇಷ್ಟು ದಿನ ಸರ್ಕಾರವನ್ನು ಟೀಕಿಸುತ್ತಿದ್ದ ಶಾಸಕರಾದ ಸುಧಾಕರ್, ಬಿ.ಸಿ.ಪಾಟೀಲ್ ಯು ಟರ್ನ್ ತೆಗೆದುಕೊಂಡು ಸಿಎಂ ಬಗ್ಗೆ ಸಾಫ್ಟ್ ಕಾರ್ನರ್ ತೋರುತ್ತಿದ್ದಾರೆ.
ರಮೇಶ್ ಜಾರಕಿಹೊಳಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಅಸಮಾಧಾನವನ್ನು ಶಮನ ಮಾಡಲು ಸಿಎಂ ಮತ್ತು ಡಿಸಿಎಂ ಯಶಸ್ವಿಯಾಗಿದ್ದಾರೆ. ಇತ್ತ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದ ಪಕ್ಷೇತರ ಶಾಸಕರು ಮತ್ತೆ ಮೈತ್ರಿಯತ್ತ ಮುಖ ಮಾಡಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.