ಬೆಂಗಳೂರು, ಜೂ.1-ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ನಿರೀಕ್ಷೆಗೂ ಮೀರಿದ ಸ್ಥಾನಗಳು ಬಂದಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಬದಲಾವಣೆ ಮಾಡದಿರಲು ವರಿಷ್ಠರು ತೀರ್ಮಾನಿಸಿದ್ದಾರೆ.
ಇನ್ನು ಮೂರು ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನದಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನೇ ಮುಂದುವರೆಸಿ ಪಕ್ಷವನ್ನು ಇನ್ನಷ್ಟು ಬೇರುಮಟ್ಟದಿಂದ ಇನ್ನಷ್ಟು ಸಂಘಟಿಸಲು ವರಿಷ್ಠರು ಸೂಚನೆ ಕೊಟ್ಟಿದ್ದಾರೆ.
ಮೂರು ದಿನಗಳ ಹಿಂದೆ ನವದೆಹಲಿಗೆ ತೆರಳಿದ್ದ ಯಡಿಯೂರಪ್ಪ ಹಾಲಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಮಿತ್ ಷಾ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಅಧ್ಯಕ್ಷ ಸ್ಥಾನದಿಂದ ಪಲ್ಲಟ ಮಾಡುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಯಾವುದೇ ಸಂದರ್ಭದಲ್ಲಾದರೂ ಅಸ್ಥಿರಗೊಳ್ಳಬಹುದು. ಯಡಿಯೂರಪ್ಪ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿದ್ದರೆ ಮಾತ್ರ ಕೆಲವು ಶಾಸಕರು ಬಿಜೆಪಿಗೆ ಬರಬಹುದು ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ವರಿಷ್ಠರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿತ್ತು.ಕೇವಲ ಮೋದಿ ಅಲೆಯಿಂದ ಮಾತ್ರ ಗೆಲ್ಲಲು ಸಾಧ್ಯವಾಗಿಲ್ಲ.
ರಾಜ್ಯದಲ್ಲಿರುವ ಪ್ರಬಲ ವೀರಶೈವ ಲಿಂಗಾಯತ ಸಮುದಾಯ ಬಿಜೆಪಿ ಬೆನ್ನಿಗೆ ನಿಂತಿರುವ ಕಾರಣ ಆ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪ ಅವರನ್ನು ಬದಲಾಯಿಸುವುದು ಪಕ್ಷದ ಹಿತದೃಷ್ಟಿಯಿಂದ ಸರಿಯಲ್ಲ ಎಂಬ ಲೆಕ್ಕಾಚಾರ ವರಿಷ್ಠರದ್ದಾಗಿದೆ.
ತಕ್ಷಣವೇ ಬಿಎಸ್ವೈ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ಪಕ್ಷದಲ್ಲಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಸಂತೋಷ್ ಮೇಲುಗೈ ಸಾಧಿಸಬಹುದು. ಇದರಿಂದ ಮತ್ತೆ ಬಣ ರಾಜಕೀಯ ಉಂಟಾಗಿ ಬಿಜೆಪಿ ಇಬ್ಭಾಗದತ್ತ ಸಾಗಬಹುದೆಂಬ ಭೀತಿ ಹೈಕಮಾಂಡ್ಗೂ ಕಾಡಿದೆ.
ಯಡಿಯೂರಪ್ಪ ತಾವು ಸೂಚಿಸಿದವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸದಿದ್ದರೆ ಸುಮ್ಮನೆ ಕೂರುವ ಜಾಯಮಾನದವರಲ್ಲ. ಇಲ್ಲದ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳುವ ಬದಲು ಯಥಾಸ್ಥಿತಿಯನ್ನೇ ಮುಂದುವರೆಸಿಕೊಂಡು ಹೋಗುವಂತೆ ವರಿಷ್ಠರು ರಾಜ್ಯ ನಾಯಕರಿಗೆ ಸೂಚನೆ ಕೊಟ್ಟಿದ್ದಾರೆ.
ಪ್ರಸ್ತುತ ಅಮಿತ್ ಷಾ ನರೇಂದ್ರ ಮೋದಿ ಸಂಪುಟದಲ್ಲಿ ಗೃಹ ಸಚಿವರಾಗಿದ್ದಾರೆ.ಪಕ್ಷದ ನಿಯಮದಂತೆ ಓರ್ವ ವ್ಯಕ್ತಿ ಒಂದೇ ಹುದ್ದೆ ನಿಯಮವನ್ನು ಎಲ್ಲರೂ ಬಿಜೆಪಿಯಲ್ಲಿ ಪಾಲಿಸಲೇಬೇಕು. ಇದೀಗ ಎರಡನೇ ಬಾರಿಗೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮೋದಿಯಷ್ಟೆ ಬೆವರು ಸುರಿಸಿದ ವ್ಯಕ್ತಿ ಎಂದರೆ ಅಮಿತ್ ಷಾ.
ಸದ್ಯದಲ್ಲೇ ಅವರು ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ತೆರವಾಗಲಿರುವ ಈ ಸ್ಥಾನಕ್ಕೆ ಜೆ.ಪಿ.ನಡ್ಡಾ ಹೆಸರು ಚಾಲ್ತಿಯಲ್ಲಿದೆ. ಸದ್ಯಕ್ಕೆ ರಾಷ್ಟ್ರೀಯ ನಾಯಕರು ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯತ್ತ ಗಮನಹರಿಸುತ್ತಿದ್ದಾರೆ.
ಈ ವರ್ಷಾಂತ್ಯಕ್ಕೆ ಮಹಾರಾಷ್ಟ್ರ, ಹರಿಯಾಣ, ಜಮ್ಮು ಮತ್ತು ಕಾಶ್ಮೀರಗಳಲ್ಲಿ ವಿಧಾನಸಭೆ ಚುನಾವಣೆ ಜರುಗಲಿದೆ. ಪುನಃ ಅಧಿಕಾರ ಉಳಿಸಿಕೊಳ್ಳುವ ಜರೂರತ್ತು ಬಿಜೆಪಿಗಿದೆ.ಹೀಗಾಗಿ ಕರ್ನಾಟಕದ ಯಾವುದೇ ಬೆಳವಣಿಗೆಗಳ ಬಗ್ಗೆ ಅಷ್ಟೊಂದು ಗಮನಹರಿಸಲು ವರಿಷ್ಠರಿಗೂ ಸಮಯವಿಲ್ಲ. ಈ ಎಲ್ಲಾ ಳವಣಿಗೆಗಳಿಂದ ಯಡಿಯೂರಪ್ಪ ಅಧ್ಯಕ್ಷ ಸ್ಥಾನದಲ್ಲಿ ಕೆಲ ದಿನಗಳ ಮಟ್ಟಿಗೆ ಮುಂದುವರೆಯಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.