ಬೆಂಗಳೂರು,ಜೂ.1- ಟೆಲಿಕಾಂ ಸೇವೆಯಲ್ಲಿ ದೈತ್ಯ ಸಂಸ್ಥೆಯಾದ ಏರ್ಟೆಲ್ನ ನೆಟ್ವರ್ಕ್ ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಕಡಿತಗೊಂಡು ಕೋಟ್ಯಂತರ ಜನ ಪರದಾಡುವಂತಾಯಿತು.
ಇಂದು ಬೆಳಿಗೆ 10.30ಕ್ಕೆ ಇದ್ದಕ್ಕಿದ್ದಂತೆ ಕಡಿತಗೊಂಡ ಏರ್ಟೆಲ್ನ ನೆಟ್ವರ್ಕ್ ಮಧ್ಯಾಹ್ನವಾದರೂ ಸರಿಹೋಗಲಿಲ್ಲ. ಮೊಬೈಲ್ನಲ್ಲಿ ಏರ್ಟೆಲ್ ಸಿಗ್ನಲ್ ಸ್ಪಷ್ಟವಾಗಿ ಕಾಣಿಸುತಿತ್ತು. ಆದರೆ ಸಂಪರ್ಕ ಕಡಿತಗೊಂಡಿತ್ತು. ಹೊರ ಹೋಗುವ ಕರೆಗಳು, ಸಂದೇಶಗಳು ಸಂಪೂರ್ಣವಾಗಿ ತಟಸ್ಥಗೊಂಡಿತ್ತು.
ನೆಟ್ವರ್ಕ್ ಇಲ್ಲದ ಕಾರಣ ಏರ್ಟೆಲ್ ಗ್ರಾಹಕರು ಇಕ್ಕಟ್ಟಿಗೆ ಸಿಲುಕಿದರು.ಪರ್ಯಾಯ ನೆಟ್ವರ್ಕ್ ಇಟ್ಟುಕೊಂಡಿದ್ದವರಿಗೆ ಹೆಚ್ಚಿನ ತೊಂದರೆಯಾಗಲಿಲ್ಲ. ಆದರೆ ಏರ್ಟೇಲ್ನ್ನೆ ನಂಬಿಕೊಂಡಿದ್ದ ಗ್ರಾಹಕರಿಗೆ ಏರ್ಟೇಲ್ ಸೇವೆ ಸಂಪೂರ್ಣ ಸ್ಥಗಿತಗೊಂಡಿತ್ತು.
ಇತ್ತೀಚಿನ ದಿನಗಳಲ್ಲಿ ಏರ್ಟೆಲ್ನಿಂದ ನೆಟ್ವರ್ಕ್ ಸಮಸ್ಯೆಗಳು ಹೆಚ್ಚಾಗಿದೆ ಎಂದು ಗ್ರಾಹಕರು ಗೊಣಗಾಡಿದರು.
ಈ ವರ್ಷ ಸುಮಾರು ಒಂದು ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿ ಕರ್ನಾಟಕದಲ್ಲಿ 13 ಸಾವಿರ ಹೆಚ್ಚುವರಿ ಟವರ್ಗಳನ್ನು, 4500 ಆಪ್ಟಿಕಲ್ ಫೈಬರ್ ಕೇಬಲ್ನ್ನು ಅಳವಡಿಸಿರುವುದಾಗಿ ಏರ್ಟೆಲ್ ಕಂಪನಿ ಹೇಳಿಕೊಂಡಿದೆ.
ಇದರಿಂದಾಗಿ ಒಟ್ಟು 36000 ಟವರ್ಗಳು, 17000 ಕಿ.ಮೀ ಆಪ್ಟಿಕಲ್ ಫೈಬರ್ ಸಂಪರ್ಕವನ್ನು ಕಂಪನಿ ಸಾಧಿಸಿದೆ. ಆದರೆ ಪದೇ ಪದೇ ತಾಂತ್ರಿಕವಾಗಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸಲು ಕಂಪನಿ ವಿಫಲವಾಗಿದೆ.
ಇಂದು ಬೆಳಗ್ಗೆಯಂತೂ ಏರ್ಟೆಲ್ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿತ್ತು.ಒಳಬರುವ ಕರೆಗಳು ಕನೆಕ್ಟ್ ಆದರೂ ಏರ್ಟೆಲ್ ಗ್ರಾಹಕರ ಮಾತುಗಳು ಮತ್ತೊಂದು ಭಾಗದ ಗ್ರಾಹಕರಿಗೆ ಕೇಳಿಸುತ್ತಿರಲಿಲ್ಲ.
ಸ್ವಲ್ಪ ಕಾಲ ಸಮಸ್ಯೆ ಇದ್ದು ಆನಂತರ ನಿವಾರಣೆಯಾಗಬಹುದು ಎಂದು ನಿರೀಕ್ಷೆ ಮಾಡಿದವರ ಸಹನೆ ಕೆಟ್ಟಿತು. ಏರ್ಟೆಲ್ ಸಂಸ್ಥೆಗೆ ವಾಚಾಮಾಗೋಚರವಾಗಿ ಶಪಿಸಿದರು.
ಪ್ರತಿ ತಿಂಗಳು ಯಾವುದೇ ಮುಲಾಜಿಲ್ಲದೆ ಹಣ ಕಸಿದುಕೊಳ್ಳುವ ಏರ್ಟೆಲ್ ಸರಿಯಾದ ಸೇವೆ ನೀಡದೆ ವಂಚನೆ ಮಾಡುತ್ತಿದೆ ಎಂದು ಗ್ರಾಹಕರ ಆರೋಪವಾಗಿತ್ತು.