ಪಿತೋರ್ಗಢ : ನಂದಾ ದೇವಿ ಪರ್ವತ ಏರಲು ತೆರಳಿದ್ದ 8 ಜನರ ತಂಡ ಕಾಣೆಯಾದ ಬಗ್ಗೆ ವರದಿಯಾಗಿದೆ. ಕಾಣೆಯಾದವರಲ್ಲಿ ಓರ್ವ ಭಾರತೀಯನಿದ್ದು, ಉಳಿದ ಏಳು ಜನ ವಿದೇಶಿಗರು ಎಂದು ತಿಳಿದು ಬಂದಿದೆ.
ಮೇ 13ರಂದು ಉತ್ತರಾಖಂಡದ ಪಿತೋರಗಢದಲ್ಲಿರುವ ನಂದಾ ದೇವಿ ಪರ್ವತಕ್ಕೆ ಇಂಗ್ಲೆಂಡ್, ಅಮೆರಿಕ ಹಾಗೂ ಆಸ್ಟ್ರೇಲಿಯಾದ ಪರ್ವಾತರೋಹಿಗಳು ತೆರಳಿದ್ದರು. 7,434 ಮೀಟರ್ ಎತ್ತರ ಇರುವ ಈ ಪರ್ವತ ಏರಿ ಶುಕ್ರವಾರ ಅವರು ವಾಪಾಸಾಗಬೇಕಿತ್ತು. ಆದರೆ, ಈ ತಂಡ ಮರಳಿ ಬಂದಿಲ್ಲ.
ಶುಕ್ರವಾರ ತಡರಾತ್ರಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ರಕ್ಷಣಾ ತಂಡವೊಂದು ಇವರ ಹುಡುಕಾಟಕ್ಕೆ ಮುಂದಾಗಿದೆ. ಮುನ್ಸಿಯಾರಿಯಿಂದ ಆರಂಭವಾಗುವ ಚಾರಣ ನಂದಾ ದೇವಿ ಕ್ಯಾಂಪ್ವರೆಗೆ ಸಾಗುತ್ತದೆ. ಒಟ್ಟು 90 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಬೇಕಾಗುತ್ತದೆ. ಈ ವೇಳೆ ಸಾಕಷ್ಟು ಸವಾಲುಗಳನ್ನು ಪರ್ವತಾರೋಹಿಗಳು ಎದುರಿಸುತ್ತಾರೆ.
8 ಜನರ ತಂಡ ಪರ್ವತ ಇಳಿಯುವಾಗ ಕಾಣೆಯಾಗಿದೆ ಎನ್ನಲಾಗಿದೆ. ಸದ್ಯ ಇವರಿಗಾಗಿ ಹುಡುಕಾಟ ಮುಂದುವರಿದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಪ್ರಥಮ ಚಿಕಿತ್ಸೆ ನೀಡುವ ತಂಡ ಶೋಧ ಕಾರ್ಯದಲ್ಲಿ ಪಾಲ್ಗೊಂಡಿದೆ.