ನವದೆಹಲಿ, ಮೇ 31-ಕೇಂದ್ರೀಯ ತನಿಖಾ ದಳದ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನ ವಿರುದ್ಧದ ಲಂಚ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು ಸಿಬಿಐಗೆ ದೆಹಲಿ ಹೈಕೋರ್ಟ್ ಇನ್ನೂ ನಾಲ್ಕು ತಿಂಗಳ ಅವಧಿ ವಿಸ್ತರಿಸಿದೆ.
ಲಂಚ ಪ್ರಕರಣದ ಸಂಬಂಧ ಆಸ್ತಾನ, ಡಿಎಸ್ಪಿ ದೇವೇಂದರ್ ಕುಮಾರ್ ಮತ್ತು ಮಧ್ಯವರ್ತಿ ಮನೋಜ್ ಪ್ರಸಾದ್ ಅವರ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ತನ್ನ ತನಿಖೆ ಪೂರ್ಣಗೊಳಿಸಲು ಸಮಯಾವಕಾಶ ವಿಸ್ತರಿಸುವಂತೆ ಕೋರಿ ಸಿಬಿಐ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.
ನ್ಯಾಯಮೂರ್ತಿ ಮುಕ್ತ ಗುಪ್ತಾ ಈ ಮನವಿಯನ್ನು ಪುರಸ್ಕರಿಸಿ ತನಿಖಾ ಅವಧಿಯನ್ನು ಇನ್ನೂ ನಾಲ್ಕು ತಿಂಗಳು ವಿಸ್ತರಿಸಿತು .
ಈ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು ಸಿಬಿಐಗೆ ನ್ಯಾಯಾಲಯವು 10 ವಾರಗಳ ಕಾಲಾವಕಾಶ ಮಂಜೂರು ಮಾಡಿತ್ತು. 10 ವಾರಗಳು ಪೂರ್ಣಗೊಂಡ ನಂತರ ಸಿಬಿಐ ಹೈಕೋರ್ಟ್ಗೆ ಮತ್ತೆ ಗಡುವು ವಿಸ್ತರಿಸುವಂತೆ ಕೋರಿತ್ತು.
ಅಪರಾಧ ಪ್ರಕರಣದಿಂದ ಉದ್ಯಮಿಯನ್ನು ಪಾರು ಮಾಡಲು ಆಸ್ತಾನ ಮತ್ತು ಕುಮಾರ್ ಆತನಿಂದ ಲಂಚ ಪಡೆದರೆನ್ನಲಾದ ಕೇಸ್ಗೆ ಇದು ಸಂಬಂಧಿಸಿದ್ದಾಗಿದೆ.
ಆಸ್ತಾನ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್ಗಳ ಅನ್ವಯ ಕ್ರಿಮಿನಲ್ ಪಿತೂರಿ, ಭ್ರಷ್ಟಾಚಾರ ಮತ್ತು ಕ್ರಿಮಿನಲ್ ದುರ್ನಡತೆ ಪ್ರಕರಣಗಳನ್ನು ಸಿಬಿಐ ದಾಖಲಿಸಿಕೊಂಡಿದೆ.
ಈ ಸಂಬಂಧ ಕಳೆದ ವರ್ಷ ಅಕ್ಟೋಬರ್ 22ರಂದು ಆಸ್ತಾನ ಅವರನ್ನು ಬಂಧಿಸಲಾಗಿತ್ತು, ನಂತರ ಅಕ್ಟೋಬರ್ 31ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.