ಆತ್ಮಾಹುತಿ ಕಾರ್ ಬಾಂಬ್ ಸ್ಪೋಟಕ್ಕೆ 9 ಮಂದಿ ಬಲಿ

ಕಾಬೂಲ್, ಮೇ 31-ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್ ಉಗ್ರರ ಅಟ್ಟಹಾಸ ಮುಂದುವರಿದಿದೆ. ರಾಜಧಾನಿ ಕಾಬೂಲ್ ಸಮೀಪ ಇಂದು ಬೆಳಗ್ಗೆ ಆತ್ಮಾಹುತಿ ಕಾರ್ ಬಾಂಬ್ ಸ್ಫೋಟದಲ್ಲಿ 9 ಮಂದಿ ಹತರಾಗಿದ್ದು, ಅನೇಕರು ಗಾಯಗೊಂಡಿದ್ದಾರೆ.

ಆಫ್ಘಾನ್ ಸೇನಾ ಅಕಾಡೆಮಿ ಮತ್ತು ತರಬೇತಿ ಕೇಂದ್ರದ ಹೊರೆ ನಿನ್ನೆಯಷ್ಟೇ ನಡೆದ ಮಾನವ ಬಾಂಬ್ ದಾಳಿಯಲ್ಲಿ ಆರು ಮಂದಿ ಮೃತಪಟ್ಟು, ಕೆಲವರಿಗೆ ತೀವ್ರ ಗಾಯಗಳಾಗಿದ್ದವು. ಈ ಕೃತ್ಯದ ಬೆನ್ನಲ್ಲೇ ಮತ್ತೊಂದು ಆತ್ಮಾಹತ್ಯಾ ದಾಳಿ ನಡೆದಿದೆ.

ಪೂರ್ವ ಯಕಟೋಟ್‍ನಲ್ಲಿ ಈ ಕಾರ್‍ಬಾಂಬ್ ದಾಳಿ ನಡೆದಿದ್ದು, ಸಾವು-ನೋವಾಗಿದೆ ಎಂದು ಕಾಬೂಲ್ ಪೊಲೀಸ್ ಮುಖ್ಯ ವಕ್ತಾರ ಫಿರ್ದೋಸ್ ಫರಮಜ್ ಹೇಳಿದ್ದಾರೆ.

ಸ್ಫೋಟ ನಡೆದ ಸ್ಥಳದ ಬಳಿ ಅಮೆರಿಕ ಮತ್ತು ನ್ಯಾಟೋ ಮಿತ್ರ ಪಡೆಗಳ ನಿರ್ವಹಣಾ ಸಂಕೀರ್ಣಗಳು ಮತ್ತು ಆಘ್ಘನ್ ರಾಷ್ಟ್ರೀಯ ಭದ್ರತಾ ಪಡೆಗಳ ಕಾರ್ಯಾಚರಣೆ ಕೇಂದ್ರಗಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ