ರೈಲಿನಲ್ಲಿ ಕಂಟ್ರಿಮೇಡ್ ಗ್ರೆನೈಡ್ ಪತ್ತೆ-ಕೆಲಕಾಲ ಪ್ರಯಾಣಿಕರಲ್ಲಿ ಆತಂಕ

ಬೆಂಗಳೂರು, ಮೇ 31- ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ರೈಲಿನಲ್ಲಿ ಕಂಟ್ರಿಮೇಡ್ ಗ್ರೆನೈಡ್ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಯಾಣಿಕರಲ್ಲಿ ಆತಂಕ ಮೂಡಿಸಿತ್ತು.

ಇಂದು ಬೆಳಿಗ್ಗೆ 8.45ರಲ್ಲಿ ಪ್ಲಾಟ್ ಫಾರಂ 1ರಲ್ಲಿ ನಿಲುಗಡೆಗೊಂಡಿದ್ದ ಪಾಟ್ನಾ ಎಕ್ಸ್‍ಪ್ರೆಸ್ ರೈಲಿನ ಎಸ್-1ಬೋಗಿಯಲ್ಲಿ ಗ್ರೆನೈಡ್ ಮಾದರಿ ವಸ್ತು ಪತ್ತೆಯಾಗಿದೆ. ರೈಲಿನಲ್ಲಿ ಕುಳಿತುಕೊಂಡಿದ್ದ ಪ್ರಯಾಣಿಕರೊಬ್ಬರು ಅದನ್ನು ಕಲ್ಲೆಂದು ಭಾವಿಸಿ ಹೊರಗೆ ಎಸೆದಿದ್ದಾರೆ.

ಇದನ್ನು ಗಮನಿಸಿದ ಪ್ರಯಾಣಿಕರು ಬಾಂಬ್ ಇರಬಹುದೆಂದು ಆತಂಕಕೊಂಡು ತಕ್ಷಣ ರೈಲ್ವೆ ಪೊಲೀಸರಿಗೆ ತಿಳಿಸಿದ್ದಾರೆ.

ರೈಲ್ವೆ ಪೊಲೀಸರು, ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿಗಳು, ಶ್ವಾನದಳ ಸ್ಥಳಕ್ಕಾಗಮಿಸಿ ಬೋಗಿಯಲ್ಲಿದ್ದ ಪ್ರಯಾಣಿಕರನ್ನು ಹೊರಗೆ ಕಳುಹಿಸಿ ತಪಾಸಣೆ ನಡೆಸಿದರು.

ಸ್ಥಳಕ್ಕೆ ರೈಲ್ವೆ ಐಜಿಪಿ ರೂಪಾ, ಎಸ್‍ಪಿಗಳಾದ ರಾಜಪ್ಪ, ಭೀಮಾಶಂಕರ್ ಗುಳೇದ್ ಮತ್ತಿತರ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಖುದ್ದು ರೈಲಿನ ಬೋಗಿಯನ್ನು ಪರಿಶೀಲಿಸಿದರು.

ಸ್ಥಳದಲ್ಲಿ ಪತ್ತೆಯಾದ ಕಂಟ್ರಿಮೇಡ್ ಗ್ರೆನೈಡ್‍ನ್ನು ಬಾಂಬ್ ನಿಷ್ಕ್ರಿಯದಳದವರು ನಿಷ್ಕ್ರಿಯಗೊಳಿಸಿ ಅದರಲ್ಲಿದ್ದ ವಸ್ತುಗಳನ್ನು ಪರೀಕ್ಷೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಇಂದು ಬೆಳಗ್ಗೆ 9ಗಂಟೆಗೆ ಸಂಘಮಿತ್ರ ರೈಲು ಪಾಟ್ನಾಗೆ ಹೊರಡಬೇಕಿತ್ತು. 8.45ರ ಸುಮಾರಿಗೆ ವ್ಯಕ್ತಿಯೊಬ್ಬ ಈ ಬೋಗಿಯೊಳಗೆ ಬಂದು ಗ್ರೆನೈಡ್ ಮಾದರಿಯ ವಸ್ತುವನ್ನು ಇಟ್ಟು ಹೋಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಸ್ಥಳದಲ್ಲಿನ ಸಿಸಿಟಿವಿಗಳನ್ನು ಆಧರಿಸಿ ಈ ವಸ್ತುವನ್ನು ರೈಲಿನೊಳಗೆ ಯಾರು ತಂದಿಟ್ಟು ಹೋಗಿದ್ದಾರೆ ಎಂಬ ಬಗ್ಗೆ ರೈಲ್ವೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂಬ ವದಂತಿ ಹರಡುತ್ತಿದ್ದಂತೆ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ದಿಕ್ಕಾಪಾಲಾಗಿ ಓಡಿದ್ದರಿಂದ ಕೆಲಕಾಲ ರೈಲ್ವೆ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

 ಈ ಘಟನೆಯಿಂದಾಗಿ ಕೆಲ ರೈಲುಗಳ ಸಂಚಾರದಲ್ಲಿ ಕೆಲಕಾಲ ವಿಳಂಭವಾಗಿದ್ದು ಕಂಡು ಬಂತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ