ಬಿಬಿಎಂಪಿ ಉಪಚುನಾವಣೆ ಫಲಿತಾಂಶ-ತಲಾ ಒಂದೊಂದು ಸ್ಥಾನ ಪಡೆದ ಮೈತ್ರಿ ಪಕ್ಷ ಮತ್ತು ಬಿಜೆಪಿ

ಬೆಂಗಳೂರು, ಮೇ 31- ಬಿಬಿಎಂಪಿಯ ಎರಡು ವಾರ್ಡ್‍ಗಳಿಗೆ ನಡೆದ ಉಪ ಚುನಾವಣೆಯಲ್ಲಿ ಒಂದು ಕ್ಷೇತ್ರ ಮೈತ್ರಿ ಅಭ್ಯರ್ಥಿಗೆ, ಮತ್ತೊಂದು ಕ್ಷೇತ್ರ ಬಿಜೆಪಿಗೆ ಒಲಿದಿದೆ.

ಕಾವೇರಿಪುರ ವಾರ್ಡ್‍ನಲ್ಲಿ ಬಿಜೆಪಿ ಅಭ್ಯರ್ಥಿ ಪಲ್ಲವಿ ಚನ್ನಪ್ಪ ಅವರು ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಸುಶೀಲಾ ಸುರೇಶ್ ಅವರನ್ನು ಕೇವಲ 78 ಮತಗಳ ಅಂತರದಿಂದ ಪರಾಭವಗೊಳಿಸಿ ವಿಜಯದ ನಗೆ ಬೀರಿದ್ದಾರೆ.

ಸಗಾಯ್‍ಪುರಂ ವಾರ್ಡ್‍ನಲ್ಲಿ ಮೈತ್ರಿ ಅಭ್ಯರ್ಥಿ ಪಳನಿಯಮ್ಮಾಳ್ ಅವರು ಪಕ್ಷೇತರ ಅಭ್ಯರ್ಥಿ ಮಾರಿಮುತ್ತು ಅವರನ್ನು 3339 ಮತಗಳ ಅಂತರದಿಂದ ಸೋಲಿಸಿದ್ದರೆ, ಈ ವಾರ್ಡ್‍ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಜೈರಿಮ್ ಅವರು ಕೇವಲ 431 ಮತಗಳನ್ನು ಪಡೆದು ಮುಖಭಂಗಕ್ಕೊಳಗಾಗಿದ್ದಾರೆ.

ಸಗಾಯ್‍ಪುರಂ ವಾರ್ಡ್‍ನಲ್ಲಿ ಮೊದಲ ಸುತ್ತಿನಲ್ಲಿ 832 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ ಪಳನಿಯಮ್ಮಾಳ್ ಯಾವುದೇ ಸುತ್ತಿನಲ್ಲೂ ಹಿನ್ನಡೆ ಕಾಣದೆ ಗೆಲುವು ಸಾಧಿಸಿದರು.

ಕಾವೇರಿಪುರ ವಾರ್ಡ್‍ನಲ್ಲಿ ಪಲ್ಲವಿ ಚೆನ್ನಪ್ಪ ಅವರು ಮೊದಲ ಸುತ್ತಿನಲ್ಲಿ ಮೈತ್ರಿ ಅಭ್ಯರ್ಥಿಗಿಂತ ಕೇವಲ 96 ಮತಗಳ ಮುನ್ನಡೆ ಪಡೆದುಕೊಂಡರು. ನಾಲ್ಕನೆ ಸುತ್ತಿನಲ್ಲಿ ಮೈತ್ರಿ ಅಭ್ಯರ್ಥಿ 273 ಮತಗಳ ಮುನ್ನಡೆ ಪಡೆದುಕೊಂಡರು. ಆರನೆ ಸುತ್ತಿನಲ್ಲಿ ಸುಶೀಲಾ ಸುರೇಶ್ ಅವರು ಕೇವಲ 8 ಮತಗಳ ಅಂತರದಿಂದ ಮುಂದಿದ್ದರು.

ಆದರೆ ಅಂತಿಮ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಪಲ್ಲವಿ ಅವರು 9,507 ಮತಗಳನ್ನು ಪಡೆದುಕೊಂಡರೆ, ಮೈತ್ರಿ ಅಭ್ಯರ್ಥಿ 9,429 ಮತಗಳನ್ನು ಪಡೆದುಕೊಂಡು 78 ಮತಗಳ ಅಂತರದಿಂದ ವಿರೋಚಿತ ಸೋಲು ಅನುಭವಿಸಿದರು.

ಖುಷಿ ತಂದಿದೆ: ಅಂತರ ಮುಖ್ಯವಲ್ಲ. ಗೆಲುವು ಖುಷಿ ತಂದಿದೆ. ನನ್ನ ಗೆಲುವಿಗೆ ಶಾಸಕ ಸೋಮಣ್ಣ ಅವರ ಆಶೀರ್ವಾದವಿದೆ. ಮತದಾನ ಸಂದರ್ಭದಲ್ಲಿ ಕೆಲವು ಗಲಾಟೆಯಾದರೂ ಮತದಾರರು ನನ್ನನ್ನು ಆಶೀರ್ವದಿಸಿದ್ದಾರೆ.

ನನ್ನ ಗೆಲುವಿಗೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಎಲ್ಲಾ ಬಿಜೆಪಿ ಬಿಬಿಎಂಪಿ ಸದಸ್ಯರು ಸಹಕರಿಸಿದ್ದಾರೆ. ಎಲ್ಲರಿಗೂ ಅಭಿನಂದಿಸುತ್ತೇನೆ ಎಂದು ವಿಜೇತ ಅಭ್ಯರ್ಥಿ ಪಲ್ಲವಿ ಸಂತಸ ವ್ಯಕ್ತಪಡಿಸಿದ್ದಾರೆ.

ಮತಗಳ ಅಂತರ
ಸಗಾಯ್‍ಪುರಂ
ಮೈತ್ರಿ ಅಭ್ಯರ್ಥಿ ಪಳನಿಯಮ್ಮಾಳ್ 6,313
ಪಕ್ಷೇತರ ಅಭ್ಯರ್ಥಿ ಮಾರಿಮುತ್ತು 3,791

ಬಿಜೆಪಿ ಅಭ್ಯರ್ಥಿ ಜೈರಿಮ್ 431
ಗೆಲುವಿನ ಅಂತರ 2,522 ಮತ.

ಕಾವೇರಿಪುರ
ಬಿಜೆಪಿ ಅಭ್ಯರ್ಥಿ ಪಲ್ಲವಿ ಚೆನ್ನಪ್ಪ 9,507
ಮೈತ್ರಿ ಅಭ್ಯರ್ಥಿ ಸುಶೀಲಾ ಸುರೇಶ್ 9,429
ಗೆಲುವಿನ ಅಂತರ 78 ಮತ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ