ಬುದ್ರ್ವಾನ್, ಮೇ 31-ಲೋಕಸಭಾ ಚುನಾವಣೆಯ ಎಲ್ಲ ಏಳು ಹಂತಗಳ ಪ್ರಚಾರ ಮತ್ತು ಮತದಾನ ಸಂದರ್ಭಗಳಲ್ಲೂ ವ್ಯಾಪಕ ಹಿಂಸಾಚಾರ ಮತ್ತು ಗಲಭೆಗೆ ಕಾರಣವಾಗಿದ್ದ ಪಶ್ಚಿಮ ಬಂಗಾಳದಲ್ಲಿ ಫಲಿತಾಂಶ ನಂತರವೂ ರಕ್ತದೋಕುಳಿ ಮುಂದುವರಿದಿದೆ. ಬುದ್ರ್ವಾನ್ನಲ್ಲಿ ದುಷ್ಕರ್ಮಿಗಳ ದಾಳಿಗೆ ಬಿಜೆಪಿ ಕಾರ್ಯಕರ್ತನೊಬ್ಬ ಹತನಾಗಿದ್ದಾನೆ.
ಸುಶೀಲ್ ಮಂಡಲ್ (49) ಕೊಲೆಯಾದ ಬಿಜೆಪಿ ಕಾರ್ಯಕರ್ತ. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಇವರನ್ನು ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಕೇತುಗ್ರಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಪಂಡುಕ್ ಗ್ರಾಮದಲ್ಲಿ ನಿನ್ನೆ ಸುಶೀಲ್ ಬಿಜೆಪಿ ಧ್ವಜಗಳನ್ನು ಕಟ್ಟುತ್ತಿದ್ದಾಗ ಟಿಎಂಸಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ಸುಶೀಲ್ಗೆ ಹರಿತವಾದ ಆಯುಧದಿಂದ ಇರಿದು ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಹತ್ಯೆ ಮಾಡಿರುವ ಮೂವರು ಪರಾರಿಯಾಗಿದ್ದು ಅವರಿಗಾಗಿ ತೀವ್ರ ಶೋಧ ಮುಂದುವರಿದಿದೆ.
ಉತ್ತರ ಪ್ರದೇಶದ ಅಮೇಥಿಯಲ್ಲಿ ಶನಿವಾರ ರಾತ್ರಿ ಬಿಜೆಪಿ ಸಂಸದೆ ಸ್ಮತಿ ಇರಾನಿ ಅವರ ಆಪ್ತ ಬೆಂಬಲಿಗ ಮತ್ತು ಸ್ಥಳೀಯ ಬಿಜೆಪಿ ಮುಖಂಡ ಸುರೇಂದ್ರ ಸಿಂಗ್ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಂದು ಹತ್ಯೆ ಮಾಡಿದ ಘಟನೆಯಿಂದ ಕೇಸರಿ ಪಕ್ಷದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವಾಗಲೇ ಪಶ್ಚಿಮ ಬಂಗಾಳದಲ್ಲಿ ಎರಡು ಹತ್ಯೆಗಳು ನಡೆದಿದೆ.
ನಾರ್ತ್ 24 ಪರಗಣ ಜಿಲ್ಲೆ ಭಾಟ್ಪಾಪಾದಲ್ಲಿ ಚಂದನ್ (36) ಎಂಬ ಬಿಜೆಪಿ ಸ್ಥಳೀಯ ಮುಖಂಡ ರನ್ನು ದುಷ್ಕರ್ಮಿಗಳು ಮೊನ್ನೆ ಗುಂಡಿಟ್ಟು ಕೊಂದಿದ್ದರು. ಅದಾದ ನಂತರ ಈಗ ಬದ್ರ್ವಾನ್ನಲ್ಲಿ ಸುಶೀಲ್ ಹತ್ಯೆಯಾಗಿದ್ದಾರೆ.
ಚುನಾವಣೆ ಫಲಿತಾಂಶ ಘೋಷಣೆ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇನ್ನೊಂದೆಡೆ ವಿವಿಧ ಜಿಲ್ಲೆಗಳಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗುಂಪು ಘರ್ಷಣೆಗಳು ಭುಗಿಲೆದ್ದು ಅನೇಕರು ಗಾಯಗೊಂಡಿದ್ದಾರೆ.